ನವದೆಹಲಿ :ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನೀತಿಯನ್ನು ಮುಂದುವರಿಸುವ ಭಾಗವಾಗಿ ಪತ್ರಿಕೆಗಳ ಕಾರ್ಯನಿರ್ವಹಣೆಯ ನಡುವೆ ಸರ್ಕಾರವು ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ (Anurag Thakur) ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವ ಅನುರಾಗ್ ಠಾಕೂರ್, ಪತ್ರಿಕಾ ಮಂಡಳಿ ಕಾಯ್ದೆ, 1978ರ ಅನ್ವಯ ಭಾರತೀಯ ಪತ್ರಿಕಾ ಮಂಡಳಿಯು ಶಾಸನಾತ್ಮಕ ಸ್ವಾಯತ್ತ ಸಂಸ್ಥೆಯಾಗಿದ್ದು, ಮುಖ್ಯವಾಗಿ ದೇಶದಲ್ಲಿನ ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಲು ಹಾಗೂ ದಿನಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸಲು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಬಳಕೆ ಅಥವಾ ದುರ್ಬಳಕೆಗೆ ಯಾವುದಾದರೂ ನಿರ್ಬಂಧವಿದೆಯೇ ಎಂಬ ಕುರಿತು ಉದ್ಧವ್ ಠಾಕ್ರೆ ಬಣದ ಶಿವಸೇನಾ ಸಂಸದ ಅನಿಲ್ ದೇಸಾಯಿ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಪ್ರತಿಕ್ರಿಯೆ ಬಯಸಿದ್ದರು.
ಈ ಕುರಿತು ವಿಸ್ತೃತ ಪ್ರತಿಕ್ರಿಯೆ ನೀಡಿರುವ ಸಚಿವ ಅನುರಾಗ್ ಠಾಕೂರ್, ವಿಧಿ 19(2)ರಲ್ಲಿ ಉಲ್ಲೇಖಿಸಲಾಗಿರುವ ನಿರ್ಬಂಧಗಳೊಂದಿಗೆ ವಿಧಿ 19(1)ರ ಅನ್ವಯ ಅಭಿವ್ಯಕ್ತಿ ಸ್ವಾತಂತ್ರ್ಯವು ದೇಶದ ನಾಗರಿಕರಿಗೆ ನೀಡಲಾಗಿರುವ ಸಾಂವಿಧಾನಿಕ ಮೂಲಭೂತ ಹಕ್ಕಾಗಿದೆ. ಭಾರತದ ಸಾರ್ವಭೌಮತೆ ಮತ್ತು ಐಕ್ಯತೆ, ದೇಶದ ಭದ್ರತೆ, ವಿದೇಶಗಳೊಂದಿಗಿನ ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸಭ್ಯತೆ ಹಾಗೂ ನೈತಿಕತೆ, ಮಾನಹಾನಿ ಅಥವಾ ಅಪರಾಧದ ಲಕ್ಷಣವಿರುವ ಸಂದರ್ಭಗಳಲ್ಲಿ, ದೇಶದ ಹಿತಾಸಕ್ತಿ ಕಾಪಾಡಲು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಧಿ 19(2)ರ ಅನ್ವಯ ನ್ಯಾಯೋಚಿತ ನಿರ್ಬಂಧ ವಿಧಿಸಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದ್ದಾರೆ.
ದೃಶ್ಯವಾಹಿನಿಗಳು ಹಾಗೂ ಡಿಜಿಟಲ್ ವೇದಿಕೆಗಳಿಗೆ ಈಗಾಗಲೇ ಮಾರ್ಗಸೂಚಿಗಳು ಜಾರಿಯಲ್ಲಿವೆ ಎಂದು ತಿಳಿಸಿದ ಠಾಕೂರ್, ಮಾರ್ಗಸೂಚಿಗಳು, ನೀತಿ ಸಂಹಿತೆಗಳು ಮುಂತಾದುವುಗಳ ಉಲ್ಲಂಘನೆಯ ಸಂದರ್ಭದಲ್ಲಿ ಸರ್ಕಾರ ಹಾಗೂ ಪತ್ರಿಕಾ ಮಂಡಳಿ ಸೂಕ್ತ ಕ್ರಮ ಜರುಗಿಸಿವೆ ಎಂದು ಮಾಹಿತಿ ನೀಡಿದ್ದಾರೆ.