ಕೊಚ್ಚಿ: ಕೇರಳದ ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಮೂರು ದಿನಗಳಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಸರ್ಕಾರ ಬೆಂಕಿಯನ್ನು ನಂದಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ತ್ಯಾಜ್ಯ ಘಟಕದ ಬೆಂಕಿಯಿಂದ ಹೊಗೆಯಾಡುತ್ತಲೇ ಇದ್ದು ಭಾನುವಾರ ಬೆಳಿಗ್ಗೆ ಕೊಚ್ಚಿಯ ಗಾಳಿಯ ಗುಣಮಟ್ಟವು ಮಾಲಿನ್ಯಗೊಂಡಿದೆ.
ತ್ರಿಶೂರ್, ಕೊಟ್ಟಾಯಂ, ಇಡುಕಿ ಹಾಗೂ ಭಾರತೀಯ ನೌಕಪಡೆಯ ಸುಮಾರು 25 ಅಗ್ನಿಶಾಮಕ ಘಟಕಗಳು ಬೆಂಕಿ ನಂದಿಸಲು ಹೋರಾಡುತ್ತಿದ್ದು, ಸದ್ಯ ಬೆಂಕಿಯೂ ನಿಯಂತ್ರಣಕ್ಕೆ ಬಂದಿದೆ. ಇನ್ನೂ ಹಲವು ಘಟಕಗಳು ಬರುವ ನಿರೀಕ್ಷೆ ಇದೆ.
ಸಂಜೆಯ ವೇಳೆಗೆ ಬೆಂಕಿಯನ್ನು ನಂದಿಸಬಹುದೆಂದು ಆ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಕಿ ಸತತವಾಗಿ ಉರಿಯುತ್ತಲೇ ಇರುವುದರಿಂದ ಹಾನಿಕಾರಕ ಹೊಗೆಯು ಉತ್ಪತ್ತಿಯಾಗಿ ಘಟಕದ ಸುತ್ತಮುತ್ತಲಿನ ಪ್ರದೇಶ, ಬಂದರು ಹಾಗೂ ನಗರದ ಹಲವೆಡೆ ಗಾಳಿಯೂ ಮಾಲಿನ್ಯಗೊಂಡಿದೆ.
ಕೊಚ್ಚಿ ನಗರದ ಗಾಳಿಯಲ್ಲಿ ಮಾಲಿನ್ಯವು ಹೆಚ್ಚಾಗಿದ್ದು ಶ್ವಾಸಕೋಶ ಮತ್ತು ರಕ್ತ ಪರಿಚಲನೆಗೆ ತೊಂದರೆ ಉಂಟಾಗುತ್ತದೆ ಎಂದು ಕೇರಳದ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಇದರ ಪ್ರಕಾರ ಶನಿವಾರ ಮಾಲಿನ್ಯಕಾರಕ ಕಣಗಳು (ಪಿಎಂ)-10 (ಸೂಕ್ಷ್ಮ) ಹಾಗೂ 2.5 (ಅತಿ ಸೂಕ್ಷ್ಮ) ದೂಳಿನ ಕಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಬೆಂಕಿಯಿಂದಾಗಿ ನಗರದ ಕೆಲವು ಭಾಗಗಳು ಹೊಗೆಯಿಂದ ಆವರಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರದಂದು ಎಲ್ಲರೂ ಮನೆಯೊಳಗೆ ಇರಲು ರಾಜ್ಯ ಸರ್ಕಾರ ಸೂಚಿಸಿದೆ.
ಗುರುವಾರ ಇಲ್ಲಿನ ಘಟಕದಲ್ಲಿ ಸುರಿದ ತ್ಯಾಜ್ಯಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಪ್ರತಿ ವರ್ಷ ಈ ಸಮಯದಲ್ಲಿ ಹೆಚ್ಚು ಶಾಖದಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.