ಮುಂಬೈ: ಬ್ಯಾಂಕಾಕ್‌ನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣ ಭಾನುವಾರ ಮಯನ್ಮಾರ್ ನ ರಂಗೂನ್(ಯಾಂಗೋನ್)ಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಆದಾಗ್ಯೂ, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ "ವಿಮಾನ ನಿಲ್ದಾಣದ ವೈದ್ಯಕೀಯ ತಂಡ" ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿರುವುದಾಗಿ ಇಂಡಿಗೋ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
"ಇಂಡಿಗೋ ಫ್ಲೈಟ್ 6E-57, ಬ್ಯಾಂಕಾಕ್‌ನಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರ ವೈದ್ಯಕೀಯ ತುರ್ತುಪರಿಸ್ಥಿತಿಯ ಕಾರಣ ರಂಗೂನ್‌ಗೆ ತಿರುಗಿಸಲಾಗಿದೆ. ದುರದೃಷ್ಟವಶಾತ್, ಆಗಮನದ ನಂತರ, ವಿಮಾನ ನಿಲ್ದಾಣದ ವೈದ್ಯಕೀಯ ತಂಡ ಪ್ರಯಾಣಿಕ ಮೃತಪಟ್ಟಿರುವುದಾಗಿ ಘೋಷಿಸಿದರು" ಎಂದು ಏರ್‌ಲೈನ್ ಸಂಕ್ಷಿಪ್ತ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಡಿಗೋ ಪ್ರಯಾಣಿಕನೊಬ್ಬರು ಮಾರ್ಗ ಮಧ್ಯದಲ್ಲಿ ವಿಮಾನದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ ಎರಡನೇ ಘಟನೆ ಇದಾಗಿದೆ.
ಈ ಹಿಂದೆ ಮಾರ್ಚ್ 17 ರಂದು ರಾಂಚಿ-ಪುಣೆ ಇಂಡಿಗೋ ವಿಮಾನವನ್ನು ಪ್ರಯಾಣಿಕರೊಬ್ಬರ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣ ನಾಗ್ಪುರ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿತ್ತು ಮತ್ತು ತಕ್ಷಣ ನಾಗ್ಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.