ಇಡುಕ್ಕಿ: ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ನವಜಾತ ಶಿಶು ಮರಣ ಹೊಂದಿದರಿಂದ ಮನನೊಂದು ತಾಯಿ ಮತ್ತು ಹಿರಿಯ ಮಗ ಬಾವಿಗೆ ಹಾರಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಇಡುಕ್ಕಿ ಜಿಲ್ಲೆಯ ಉಪ್ಪುಥರಾ ಪಂಚಾಯಿತಿಯ ಕೈಥಪಥಲ ಎಂಬಲ್ಲಿ ನಡೆದಿದೆ.
ಮಗು ಮೃತಪಟ್ಟ ಘಟನೆಯಿಂದ ತಾಯಿ ತುಂಬಾ ಮನನೊಂದಿದ್ದಳು ಎಂದು ಆಕೆಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತಳನ್ನು ಲಿಜಿ (38) ಎಂದು ಗುರುತಿಸಲಾಗಿದೆ. ತನ್ನ 7 ವರ್ಷದ ಮಗ ಲಿನ್ ಟಾಮ್ ಜತೆ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಇಂದು (ಮಾ.16) ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಆಕೆಯ ಸಂಬಂಧಿಕರು ಚರ್ಚ್ಗೆ ಹೋಗಿದ್ದ ಸಂದರ್ಭದಲ್ಲಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಸಂಬಂಧಿಕರು ಚರ್ಚ್ನಿಂದ ಮನೆಗೆ ಬಂದು ನೋಡಿದಾಗ ಯಾರು ಇಲ್ಲದಿರುವುದನ್ನು ಗಮನಿಸಿ ಹುಡುಕಾಡಿದಾಗ ಇಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾದರು. ಲಿಜಿ ಅವರ 28 ದಿನಗಳ ಕಿರಿಯ ಮಗು ನಿನ್ನೆ ಎದೆಹಾಲು ಸೇವಿಸುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.