ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಈ ವೀಳ್ಯದೆಲೆಯನ್ನು ಹಸಿರು ಚಿನ್ನ ಅಂತಲೂ ಕರೆಯಲಾಗುತ್ತದೆ. ಮದುವೆಯಿಂದ ಹಿಡಿದು ಪ್ರತಿಯೊಂದು ಶುಭ ಕಾರ್ಯದಲ್ಲೂ ವೀಳ್ಯದೆಲೆ ಇರಲೇಬೇಕು. ಸಾಮಾನ್ಯವಾಗಿ ಹಿರಿಯರು ಊಟದ ನಂತರ ಇದನ್ನು ಸೇವಿಸೋದನ್ನ ಅನಾದಿ ಕಾಲದಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ವೀಳ್ಯದೆಲೆಯು ಹತ್ತು ಹಲವು ರೋಗಗಳಿಗೆ ರಾಮಬಾಣವು ಆಗಿದೆ.
ನಿಮಗೊತ್ತಾ ವೀಳ್ಯದೆಲೆ ನಮ್ಮ ಕೂದಲಿನ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಹಾಗಾದ್ರೆ ವೀಳ್ಯದೆಲೆಯು ಕೂದಲಿನ ಬೆಳವಣಿಗೆಗೆ ಯಾವ ರೀತಿ ಸಹಾಯ ಮಾಡುತ್ತದೆ? ಇದರ ಬಳಕೆ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.
ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ
ವೀಳ್ಯದೆಲೆಯು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಬಳಕೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ತಲೆಗೆ ವೀಳ್ಯದೆಲೆಯನ್ನು ಬಳಕೆ ಮಾಡುವುದರಿಂದ ಕೂದಲು ಉದುರುವುದು ಮಾತ್ರವಲ್ಲ ಎಲ್ಲಾ ತರಹದ ಸಮಸ್ಯೆಯನ್ನು ಉಪಶಮನ ಮಾಡುತ್ತದೆ.
ಹೇರ್ ಮಾಸ್ಕ್ ತಯಾರಿಸುವ ವಿಧಾನ
ಮೊದಲಿಗೆ ವೀಳ್ಯದೆಲೆಯನ್ನು ಎಳ್ಳೆಣ್ಣೆಯೊಂದಿಗೆ ರುಬ್ಬಿಕೊಂಡು ಪೇಸ್ಟ್ ತಯಾರಿಸಿ. ಆ ಪೇಸ್ಟ್ ಅನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಒಂದು ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಉತ್ತಮವಾದ ಶ್ಯಾಂಪುವಿನಿಂದ ನಿಮ್ಮ ತಲೆಯನ್ನು ತೊಳೆದುಕೊಳ್ಳಿ. ಕೂದಲಿಗೆ ಸಂಬಂಧಿಸಿದ ಎಲ್ಲಾ ತರಹದ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಹಾಗೂ ವೇಗವಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. (ತೆಂಗಿನ ಎಣ್ಣೆಯನ್ನೂ ವೀಳ್ಯದೆಲೆ ಮಾಸ್ಕ್‌ನೊಂದಿಗೆ ಬಳಸಬಹುದು)
ವೀಳ್ಯದೆಲೆ ಹೇರ್ ಮಾಸ್ಕ್ ಬಳಸೋದ್ರಿಂದ ಏನೆಲ್ಲಾ ಲಾಭಗಳಿದೆ?
* ವೀಳ್ಯದೆಲೆ ಹೇರ್ ಮಾಸ್ಕ್ ಬಳಸೋದ್ರಿಂದ ಇದು ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವುದನ್ನು ತಡೆಯುತ್ತದೆ. ವೀಳ್ಯದೆಲೆ ನಿಮ್ಮ ಕೂದಲಿಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ.
* ವೀಳ್ಯದೆಲೆಯಲ್ಲಿ ಹೆಚ್ಚಿನ ಆದ್ರತೆಯನ್ನು ಹೊಂದಿದ್ದು ಕೂದಲು ಒಣಗುವುದನ್ನು ತಡೆಯುತ್ತದೆ.
* ವೀಳ್ಯದೆಲೆಯಲ್ಲಿರುವ ವಿಟಮಿನ್ ಸಿ ಅಂಶವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಕೂದಲು ಬೆಳೆಯಲು ಉತ್ತೇಜಿಸುತ್ತದೆ.
* ವೀಳ್ಯದೆಲೆಯಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳೂ ಇದ್ದು, ಅದು ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿ ಮತ್ತು ಸೋಂಕು ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
* ವೀಳ್ಯದೆಲೆಯಲ್ಲಿರುವ ಗುಣಗಳು ನಿಮ್ಮ ತಲೆಯ ಹೊಟ್ಟಿನ ಸಮಸ್ಯೆಯನ್ನು ಕೂಡ ನಿಯಂತ್ರಿಸುತ್ತದೆ.
* ವೀಳ್ಯದೆಲೆ ಹೇರ್‌ಮಾಸ್ಕ್ ನಿರಂತರವಾಗಿ ಬಳಸೋದ್ರಿಂದ ನಿಮ್ಮ ಕೂದಲನ್ನು ಉದ್ದ ಹಾಗೂ ದಪ್ಪವಾಗಿಸಲು ಸಹಾಯ ಮಾಡುತ್ತದೆ.
* ವೀಳ್ಯದೆಲೆಯು ಕೂದಲು ಸೀಳುವಿಕೆಯ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತದೆ. ಜೊತೆಗೆ ನೆತ್ತಿಯ ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.
ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳುತ್ತದೆ. ವೀಳ್ಯದೆಲೆ ಹೇರ್‌ಮಾಸ್ಕ್ ಬಳಸೋದ್ರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.