ನವದೆಹಲಿ: 'ಬಾಹ್ಯಾಕಾಶವನ್ನೂ ಶಸ್ತ್ರಾಸ್ತ್ರಗೊಳಿಸುವ ಸ್ಪರ್ಧೆ ಈಗಾಗಲೇ ಶುರುವಾಗಿದೆ. ಭೂಮಿ, ಸಮುದ್ರ, ವಾಯು, ಸೈಬರ್, ಅಂತರಿಕ್ಷ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಯುದ್ಧ ನಡೆಯುವ ಕಾಲ ದೂರವೇನೂ ಇಲ್ಲ' ಎಂದು ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ತಿಳಿಸಿದ್ದಾರೆ.
ಸಮ್ಮೇಳನವೊಂದನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, 'ದೇಶದ ಸ್ವತ್ತುಗಳ ರಕ್ಷಣೆಗಾಗಿ ಬಾಹ್ಯಾಕಾಶದಲ್ಲಿ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಸಾಮರ್ಥ್ಯ ಹೊಂದುವ ಅಗತ್ಯವಿದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಅಗತ್ಯವಿರುವ ದ್ವಿ ಬಳಕೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ಖಾಸಗಿ ವಲಯವನ್ನು ಕಡ್ಡಾಯವಾಗಿ ಪ್ರೋತ್ಸಾಹಿಸಬೇಕಿದೆ' ಎಂದಿದ್ದಾರೆ.
'ಬಾಹ್ಯಾಕಾಶ ಕ್ಷೇತ್ರದ ಆರಂಭಿಕ ಯಶಸ್ಸನ್ನು ಬಂಡವಾಳ ಮಾಡಿಕೊಂಡು ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳಿಗೆ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳಬೇಕು' ಎಂದು ಹೇಳಿದ್ದಾರೆ.
ಸಣ್ಣ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಭಾರತೀಯ ನವೋದ್ಯಮ ಸಂಸ್ಥೆ ಪಿಕ್ಸೆಲ್ ಹಾಗೂ ಈ ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯುವ ರಾಕೆಟ್‌ಗಳನ್ನು ಸಿದ್ಧಪಡಿಸುವ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿರುವ ಅವರು ತನ್ನ ಮೇಲೆ ಯುದ್ಧ ಸಾರಿರುವ ರಷ್ಯಾಕ್ಕೆ ಉಪಗ್ರಹ ತಂತ್ರಜ್ಞಾನದ ಮೂಲಕವೇ ಪ್ರತ್ಯುತ್ತರ ನೀಡಿರುವ ಉಕ್ರೇನ್‌ನ ದಿಟ್ಟತನದ ಕುರಿತೂ ಮಾತನಾಡಿದ್ದಾರೆ.
'ಇಂತಹ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವುದು ಈಗಿನ ಅಗತ್ಯವಾಗಿದೆ. ಆ ಕ್ಷಣದಲ್ಲೇ ರಾಕೆಟ್ ಉಡಾವಣೆ ಮಾಡುವುದು ಕ್ರಮೇಣ ಸಾಮಾನ್ಯವಾಗಿಬಿಡುತ್ತದೆ. ರಕ್ಷಣಾ ವಲಯದ ಕಂಪನಿಗಳು ಅಧಿಕ ಶಕ್ತಿಯ ಲೇಸರ್ ಆಧಾರಿತ ಶಸ್ತ್ರಾಸ್ತ್ರಗಳು, ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಂತಹ ಶಸ್ತ್ರಾಸ್ತ್ರಗಳಿಂದ ಅನೇಕ ಪ್ರಯೋಜನಗಳಿವೆ' ಎಂದಿದ್ದಾರೆ.
ಬಾಹ್ಯಾಕಾಶವನ್ನು ಶಸ್ತ್ರಾಸ್ತ್ರಗೊಳಿಸುವುದಕ್ಕೆ ನಮ್ಮ ವಿರೋಧವಿದೆ. ಈ ಬಗೆಯ ಸ್ಪರ್ಧೆಗೆ ಧುಮುಕುವ ಯಾವ ಉದ್ದೇಶವೂ ನಮಗೆ ಇಲ್ಲ ಎಂದು ಕೇಂದ್ರ ಸರ್ಕಾರವು ಈ ಹಿಂದೆ ಹೇಳಿತ್ತು.