ನವದೆಹಲಿ (PTI): ದೇಶದ ಜೈವಿಕ ವೈದ್ಯಕೀಯ (ಬಯೊಮೆಡಿಕಲ್) ಸಂಶೋಧನೆ ಮತ್ತು ಆರೋಗ್ಯಸೇವೆ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸುವ ವಿಚಾರವಾಗಿ ಇದೇ ಮೊದಲ ಬಾರಿಗೆ ನೀತಿಸಂಹಿತೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊರಡಿಸಿದೆ.
ಆರೋಗ್ಯ ಸಂಶೋಧನಾ ವಿಭಾಗ ಮತ್ತು ಐಸಿಎಂಆರ್‌ನ ಎಐ ಘಟಕವು ಈ ನೀತಿಸಂಹಿತೆಯನ್ನು ರೂಪಿಸಿವೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಎಐ ಉಪಕರಣಗಳನ್ನು ಅಭಿವೃದ್ಧಿಪಡಿಸಲು ನೈತಿಕ ಚೌಕಟ್ಟನ್ನು ರೂಪಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ಆರೋಗ್ಯ ಕ್ಷೇತ್ರಕ್ಕೆ ಎಐ ಅಳವಡಿಕೆಯು ಜನರ ಪಾಲ್ಗೊಳ್ಳುವಿಕೆಯ ಮೂಲಕ ದೊರೆಯುವ ದತ್ತಾಂಶದ ಮೇಲೆ ಅವಲಂಭಿಸಿದೆ. ಜೊತೆಗೆ, ಸಂಭಾವ್ಯ ಪಕ್ಷಪಾತಿ ಧೋರಣೆ, ದತ್ತಾಂಶ ನಿರ್ವಹಣೆ, ಸ್ವಾಯತ್ತತೆ, ದುಷ್ಪರಿಣಾಮ ತಗ್ಗಿಸುವಿಕೆ, ವೃತ್ತಿಪರತೆ, ದತ್ತಾಂಶ ಹಂಚಿಕೊಳ್ಳುವಿಕೆ ಮತ್ತು ಗೌಪ್ಯತೆಯಂಥ ಸಮಸ್ಯೆಗಳೂ ತಲೆದೂರುತ್ತವೆ. ಹೀಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿ ನೀತಿಸಂಹಿತಿ ಹೊಂದುವುದು ಅತ್ಯಗತ್ಯ ಎಂದು ಐಸಿಎಂಆರ್ ತಿಳಿಸಿದೆ.
ವಿಷಯ ತಜ್ಞರು, ಸಂಶೋಧಕರು, ನೀತಿಶಾಸ್ತ್ರಜ್ಞರ ಜೊತೆ ವಿಸ್ತೃತ ಚರ್ಚೆ ನಡೆಸಿದ ಬಳಿಕವೇ ಈ ನೀತಿಸಂಹಿತೆಯನ್ನು ರೂಪಿಸಲಾಗಿದೆ ಎಂದಿದ್ದಾರೆ.