ನವದೆಹಲಿ; ಶಬ್ಧಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಭಾರತೀಯ ನೌಕಪಡೆಯು ಭಾನುವಾರ ಅರಬ್ಬಿ ಸಮುದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ.
ಪರೀಕ್ಷಿಸಲಾದ ಕ್ಷಿಪಣಿಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಲವಾರು ತಾಂತ್ರಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಭಾರತೀಯ ನೌಕಾಪಡೆಯು ಡಿಆರ್‌ಡಿಒ-ವಿನ್ಯಾಸಗೊಳಿಸಿದ ಸ್ವದೇಶಿ ಅನ್ವೇಷಕ ಮತ್ತು ಬೂಸ್ಟರ್‌ನೊಂದಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಹಡಗಿನ ಮೂಲಕ ಅರಬ್ಬಿ ಸಮುದ್ರದಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿತು. ಇದು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ (ಸ್ವಾವಲಂಬನೆ) ಕಡೆಗೆ ನಮ್ಮ ಬದ್ಧತೆ ಬಲಪಡಿಸುತ್ತದೆ' ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ-ರಷ್ಯಾ ಜಂಟಿ ಉದ್ಯಮ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ ಉಡಾಯಿಸಬಹುದಾದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತದೆ.
ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ ಅಥವಾ ಶಬ್ದದ ಮೂರು ಪಟ್ಟು ವೇಗದಲ್ಲಿ ಹಾರುತ್ತದೆ.