ನವದೆಹಲಿ :ದಿಲ್ಲಿ ಸೇರಿದಂತೆ ವಿಶ್ವಾದ್ಯಂತ ತನ್ನ ಎಲ್ಲ ರಾಯಭಾರ ಕಚೇರಿಗಳನ್ನು ಮುಚ್ಚಲು ಇಸ್ರೇಲ್ ನಿರ್ಧರಿಸಿದೆ. ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರ ನ್ಯಾಯಾಂಗ ಸುಧಾರಣೆಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳೊಂದಿಗೆ ದೇಶವು ತತ್ತರಿಸಿರುವ ಬಳಿಕ ಈ ಬೆಳವಣಿಗೆ ನಡೆದಿದೆ.
ದಿಲ್ಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯನ್ನು ಮುಚ್ಚುವಂತೆ ಸೂಚಿಸಲಾಗಿದ್ದು,ಮುಂದಿನ ಸೂಚನೆಯವರೆಗೆ ಯಾವುದೇ ಕಾನ್ಸುಲರ್ ಸೇವೆಗಳನ್ನು ಅದು ಒದಗಿಸುವುದಿಲ್ಲ.
ಭಾರತದಲ್ಲಿ ಇಸ್ರೇಲ್ ರಾಯಭಾರಿಯಾಗಿರುವ ನಾವೋರ್ ಗಿಲಾನ್ ಅವರು ಇಸ್ರೇಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕೆಡೆಟ್ಗಳನ್ನು ಭಾರತಕ್ಕೆ ಬರಮಾಡಿಕೊಂಡ ದಿನವೇ ಈ ಬೆಳವಣಿಗೆ ಸಂಭವಿಸಿದೆ. ಭಾರತದಲ್ಲಿಯ ಇಸ್ರೇಲಿ ಅಧಿಕಾರಿಗಳೊಂದಿಗೆ ಸಂವಾದಿಸಲು ಈ ಕೆಡೆಟ್ಗಳು ಆಗಮಿಸಿದ್ದಾರೆ.
'ವಿವಿಧ ಕ್ಷೇತ್ರಗಳಲ್ಲಿಯ ಜನರೊಂದಿಗೆ ಸಂವಾದ ನಡೆಸಲು ಮತ್ತು ಭಾರತದ ಕುರಿತು ಹೆಚ್ಚಿನದನ್ನು ತಿಳಿದುಕೊಳ್ಳಲು ಅವರಿಲ್ಲಿದ್ದಾರೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅವರು ಆನಂದಿಸುತ್ತಾರೆ ಎಂದು ನಾವು ಆಶಿಸಿದ್ದೇವೆ 'ಎಂದು ಗಿಲಾನ್ ಈ ಮೊದಲು ಹೇಳಿದ್ದರು.
ಈ ನಡುವೆ ನೆತನ್ಯಾಹು ಅವರು ನ್ಯಾಯಾಂಗ ಸುಧಾರಣೆಗಳನ್ನು ಪ್ರಶ್ನಿಸಿದ್ದಕ್ಕಾಗಿ ರಕ್ಷಣಾ ಸಚಿವರನ್ನು ವಜಾಗೊಳಿಸಿದ ಬಳಿಕ ಇಸ್ರೇಲ್ ಅತ್ಯಂತ ತೀವ್ರ ಸಾಮಾಜಿಕ ಅಶಾಂತಿಯನ್ನು ಎದುರಿಸುತ್ತಿದ್ದು, ಸಾವಿರಾರು ಜನರು ಬೀದಿಗಳಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಇಸ್ರೇಲಿನ ಅತಿ ದೊಡ್ಡ ಕಾರ್ಮಿಕ ಒಕ್ಕೂಟ ಹಿಸ್ಟಾಡ್ರಟ್ ವಿಶ್ವಾದ್ಯಂತದ ಇಸ್ರೇಲಿ ರಾಜತಾಂತ್ರಿಕ ಕಚೇರಿಗಳು ಸೇರಿದಂತೆ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ವಿಮಾನ ನಿಲ್ದಾಣ ಕಾರ್ಯಾಚರಣೆಗಳೂ ಸ್ಥಗಿತಗೊಂಡಿವೆ. ನೆತನ್ಯಾಹು ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ದೋಷಾರೋಪಣೆಯ ಬಳಿಕ ನೆತನ್ಯಾಹು ಅವರ ಮಾಜಿ ಮಿತ್ರಪಕ್ಷಗಳು ಅವರ ವಿರುದ್ಧ ತಿರುಗಿಬಿದ್ದದ್ದರಿಂದ ಸ್ಥಿರ ಸರಕಾರವನ್ನು ರಚಿಸಲು ಅವರಿಗೆ ಸಾಧ್ಯವಾಗಿಲ್ಲ. ಇದು ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದ್ದು,ನಾಲ್ಕು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಐದು ಚುನಾವಣೆಗಳಿಗೆ ಕಾರಣವಾಗಿತ್ತು.
ಕಳೆದ ವರ್ಷ ಅಧಿಕಾರಕ್ಕೆ ಮರಳಿದ ಬಳಿಕ ಲಿಕುಡ್ ಪಾರ್ಟಿಯ ಪ್ರಮುಖ ಸದಸ್ಯರು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಪಣ ತೊಟ್ಟಿದ್ದರು. ಇದು ಅವರ ಸೈದ್ಧಾಂತಿಕ ಅಜೆಂಡಾಗಳನ್ನು ಮುಂದಕ್ಕೆ ತಳ್ಳುವ ತಂತ್ರವಾಗಿದೆ ಎಂದು ಟೀಕಾಕಾರರು ಹೇಳಿದ್ದರೆ,ಇದು ಅಗತ್ಯವಾಗಿದೆ ಎಂದು ಸರಕಾರವು ಪ್ರತಿಪಾದಿಸುತ್ತಿದೆ.