ನವದೆಹಲಿ: ಕೋವಿಡ್ ಹೊಸ ಪ್ರಕರಣಗಳ ದಾಖಲಾತಿ ಪ್ರಮಾಣ ದಿಢೀರ್ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮವನ್ನು ವಹಿಸಬೇಕು ಎಂದು ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ.
ಒಂದು ವಾರದಲ್ಲಿ 1,200 ಹೊಸ ಪ್ರಕರಣಗಳು ದಾಖಲಾಗಿವೆ ಮುಂಜಾಗ್ರತೆಯಾಗಿ ಅರ್ಹರಿಗೆ ಮೂರನೇ ಡೋಸ್ ಲಸಿಕೆ ನೀಡುವುದು, ಹೊಸ ರೂಪಾಂತರ ವೈರಾಣು ಇದೆಯೇ ಎಂಬುದರ ಪತ್ತೆಗೆ ಆದ್ಯತೆ ನೀಡಲು ಸಲಹೆ ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಈಗ ಪತ್ರ ಬರೆದಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ತಪಾಸಣೆಗೆ ಚುರುಕು ನೀಡಬೇಕು. ಅಲ್ಲದೆ, ಚಿಕಿತ್ಸೆ, ಲಸಿಕೆ ನೀಡುವುದು, ಸೋಂಕು ಹರಡುವಿಕೆ ತಡೆಗೆ ಹೆಚ್ಚಿನ ಗಮನಹರಿಸಬೇಕು ಎಂದೂ ಸಲಹೆ ಮಾಡಿದ್ದಾರೆ.
ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳ ಏರುತ್ತಿವೆ. ಸ್ಥಳೀಯ ಮಟ್ಟದಲ್ಲಿ ಸೋಂಕು ಸಾಂಕ್ರಾಮಿಕವಾಗುತ್ತಿರುವ ಸೂಚನೆ ಇದೆ. ಅಪಾಯದ ಸಾಧ್ಯತೆ ಗುರುತಿಸಿ, ತಡೆಯಲು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದೆ.
ಪ್ರಕರಣಗಳ ತಡೆಗೆ ರಾಜ್ಯಗಳು ಕಟ್ಟುನಿಟ್ಟಿನ ನಿಗಾ ವಹಿಸುವುದು ಅವಶ್ಯಕ. ಕೋವಿಡ್ -19 ಸ್ಥಿತಿಯ ಪರಿಣಾಮಕಾರಿ ನಿರ್ವಹಣೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರುಗತಿಯಲ್ಲಿ ಇರುವುದು ಕಳವಳದ ಸಂಗತಿ ಎಂದು ಪತ್ರದಲ್ಲಿ ರಾಜೇಶ್ ಭೂಷಣ್ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯೂಎಚ್‌ಒ) ದಕ್ಷಿಣ ಏಷ್ಯಾ ವಲಯದ ವರದಿ ಪ್ರಕಾರ, 13 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ 28 ದಿನಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಏರಿಕೆ ಪ್ರಮಾಣ ಶೇ 14ರಷ್ಟಿದೆ.
6 ರಾಜ್ಯಗಳಲ್ಲಿ ಶೇ 82ರಷ್ಟು ಹೊಸ ಪ್ರಕರಣ
ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ನಾಲ್ಕು ತಿಂಗಳ ಬಳಿಕ ಒಂದೇ ದಿನದಲ್ಲಿ ಸುಮಾರು 1,200 ಕೋವಿಡ್ ಪ್ರಕರಣಗಳು ವರದಿ ಆಗಿವೆ. ಇದು ಕಳವಳ ಮೂಡಿಸಿದೆ.
ಮಾರ್ಚ್ 6ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದಲ್ಲಿ 2,081 ಹೊಸ ಪ್ರಕರಣ ದಾಖಲಾಗಿದ್ದವು. ನಂತರದ ಮಾರ್ಚ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ 1,182 ಹೊಸ ಪ್ರಕರಣಗಳು ದಾಖಲಾಗಿದ್ದವು.
ಹೊಸ ಪ್ರಕರಣಗಳ ಪೈಕಿ ಶೇ 82ರಷ್ಟು ಪ್ರಕರಣಗಳು ಈ ಆರು ರಾಜ್ಯಗಳಲ್ಲಿಯೇ ವರದಿಯಾಗಿವೆ. ಹೊಸ ಪ್ರಕರಣಗಳ ದೃಢಪಡುವಿಕೆ ಪ್ರಮಾಣ ಕರ್ನಾಟಕ (ಶೇ 2.77) ಮತ್ತು ಕೇರಳದಲ್ಲಿ (ಶೇ 2.64) ಹೆಚ್ಚಿದ್ದು, ಇದು, ರಾಷ್ಟ್ರೀಯ ಸರಾಸರಿಗಿಂತಲೂ (ಶೇ 0.61) ಹೆಚ್ಚಾಗಿದೆ.