ನವದೆಹಲಿ (PTI): ನಾಗರಿಕ ಸೇವಾ ನೇಮಕಾತಿ ಪ್ರಕ್ರಿಯೆಯ ಒಟ್ಟು ಅವಧಿಯನ್ನು ಕಡಿಮೆಗೊಳಿಸುವಂತೆ ಮತ್ತು ನಾಗರಿಕ ಸೇವಾ ಪರೀಕ್ಷೆಗೆ ಕಡಿಮೆ ಅಭ್ಯರ್ಥಿಗಳು ಹಾಜರಾಗುತ್ತಿರುವ ಕುರಿತು ಕಾರಣ ತಿಳಿದುಕೊಳ್ಳುವಂತೆ ಸಂಸದೀಯ ಸ್ಥಾಯಿ ಸಮಿತಿಯೊಂದು ಕೇಂದ್ರ ನಾಗರಿಕ ಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಶಿಫಾರಸು ಮಾಡಿದೆ.
ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ಯುಪಿಎಸ್‌ಸಿ ವಾರ್ಷಿಕವಾಗಿ ಪರೀಕ್ಷೆಗಳನ್ನು ನಡೆಸುತ್ತದೆ. ಪರೀಕ್ಷೆಯ ದಿನಾಂಕಗಳನ್ನು ಘೋಷಣೆ ಮಾಡಿ, ಪರೀಕ್ಷೆ ನಡೆಸಿ ಅಂತಿಮ ಫಲಿತಾಂಶ ನೀಡಲು ಸುಮಾರು 15 ತಿಂಗಳುಗಳು ತಗಲುತ್ತವೆ. ಇದು ಸುದೀರ್ಘ ಅವಧಿ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ವ್ಯವಹಾರಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.
'ಯಾವುದೇ ನೇಮಕಾತಿ ಪರೀಕ್ಷೆಯ ಅವಧಿಯು ಆರು ತಿಂಗಳಿಗಿಂತ ಹೆಚ್ಚು ಇರಬಾರದು. ಪರೀಕ್ಷಾ ಅವಧಿ ದೀರ್ಘವಾಗಿದ್ದಷ್ಟು ಅಭ್ಯರ್ಥಿಗಳ ಜೀವನದ ಬಹುಮುಖ್ಯ ಸಮಯ ಹಾಳಾಗುವುದು ಮತ್ತು ಅವರ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು' ಎಂದು ಸಮಿತಿಯು ವರದಿಯಲ್ಲಿ ಹೇಳಿದೆ. ಜೊತೆಗೆ, ಯುಪಿಎಸ್‌ಸಿ ಪರೀಕ್ಷೆಗಳ ಒಟ್ಟು ಅವಧಿಯನ್ನು ಕಡಿತಗೊಳಿಸುವಂತೆಯೂ ಶಿಫಾರಸು ಮಾಡಿದೆ.
ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವ ಕುರಿತೂ ಸಮಿತಿ ಪ್ರಶ್ನೆ ಎತ್ತಿದೆ. 2022-23ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸುಮಾರು 32.39 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಕೇವಲ 16.82 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. ಅದೇ ವರ್ಷ ನಾಗರಿಕ ಸೇವಾ ಪರೀಕ್ಷೆಗೆ 11.35 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕೇವಲ 5.73 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. ಈ ಪ್ರವೃತ್ತಿಗೆ ಕಾರಣ ಕಂಡುಕೊಳ್ಳುವಂತೆಯೂ ಸಮಿತಿ ಯುಪಿಎಸ್‌ಸಿಗೆ ಶಿಫಾರಸು ಮಾಡಿದೆ.
ಯುಪಿಎಸ್‌ಸಿಯು ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ವಿದೇಶಾಂಗ ಸೇವೆ (ಐಆರ್‌ಎಸ್) ಸೇರಿ ಹಲವು ನಾಗರಿಕ ಸೇವಾ ಪರೀಕ್ಷೆಗಳನ್ನು ಪ್ರತಿವರ್ಷ ನಡೆಸುತ್ತದೆ.