ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಬುಧವಾರ ಬ್ರಿಟನ್‌ಗೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಬ್ರಿಟನ್‌ಗೆ ತೆರಳುವ ಮುನ್ನ ತಮ್ಮ ಲುಕ್ನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ತಮ್ಮ ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದಾರೆ.
ಉಪನ್ಯಾಸ ನೀಡಲು ತೆರಳುತ್ತಿದ್ದಂತೆ ರಾಹುಲ್ ಗಾಂಧಿ ಲುಕ್ ಬದಲಾಗಿದೆ. ಟೀ-ಶರ್ಟ್ ಕಳಚಿಟ್ಟು ಕೋಟು, ಟೈ ಧರಿಸಿ ಮಿಂಚುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಕೊನೆಗೊಳ್ಳುವವರೆಗೆ ತಮ್ಮ ಗಡ್ಡ ಟ್ರಿಮ್ ಮಾಡಿಸಿಕೊಂಡಿರಲಿಲ್ಲ. ಈ ಲುಕ್ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿತ್ತು ಮತ್ತು ಟ್ರೋಲ್ಗೂ ಒಳಗಾಗಿತ್ತು. ಇದೀಗ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ತೆಳಿರುವ ರಾಹುಲ್, ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಸದ್ಯ ರಾಹುಲ್ ಗಾಂಧಿಯ ಹೊಸ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ, ಸದ್ದಾಂ ಹುಸೇನ್‌ನಂತೆ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದರು. ಈ ಟೀಕೆಗೆ ತಿರುಗೇಟು ನೀಡಿದ್ದ ಕಾಂಗ್ರೆಸ್ ನಿಮ್ಮ ನಾಯಕ ಮೋದಿ ಗಡ್ಡ ಬಿಟ್ಟಿದ್ದಾಗ ನಾವು ಏನೂ ಹೇಳಿರಲಿಲ್ಲ ಎಂದು ಹೇಳಿತ್ತು.