ನವದೆಹಲಿ: ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಸುಪ್ರೀಂಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ನಡುವೆ ಗುರುವಾರ ವಾಗ್ವಾದ ನಡೆಯಿತು.
ಒಂದು ಹಂತದಲ್ಲಿ, 'ನೀವು ಏರಿದ ದನಿಯಲ್ಲಿ ಮಾತನಾಡಬೇಡಿ.
ನನಗೆ ಬೆದರಿಕೆ ಹಾಕಬೇಡಿ' ಎಂದು ಗದರಿದ ಸಿಜೆಐ ಚಂದ್ರಚೂಡ್, 'ಕೋರ್ಟ್ ಕೊಠಡಿಯಿಂದ ಹೊರ ನಡೆಯಿರಿ' ಎಂದು ವಿಕಾಸ್ ಸಿಂಗ್ ಅವರಿಗೆ ಸೂಚಿಸಿದ್ದಕ್ಕೂ ಸುಪ್ರೀಂಕೋರ್ಟ್ ಸಾಕ್ಷಿಯಾಯಿತು.
ವಕೀಲರ ಸಂಘಕ್ಕೆ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಜೆಐ ಚಂದ್ರಚೂಡ್ ಈ ರೀತಿ ಹೇಳಿದರು. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪಾರ್ದೀವಾಲಾ ಈ ನ್ಯಾಯಪೀಠದಲ್ಲಿದ್ದರು.
ಅರ್ಜಿ ವಿಚಾರಣೆ ವೇಳೆ ವಿಕಾಸ್ ಸಿಂಗ್ ಅವರು, 'ಕಳೆದ ಆರು ತಿಂಗಳಿಂದ ಈ ಅರ್ಜಿಯನ್ನು ವಿಚಾರಣೆ ಪಟ್ಟಿಗೆ ಸೇರಿಸಲು ಹೆಣಗಾಡುತ್ತಿದ್ದೇನೆ. ನನ್ನನ್ನು ಒಬ್ಬ ಸಾಮಾನ್ಯ ಫಿರ್ಯಾದುದಾರ ಎಂಬುದಾಗಿ ಪರಿಗಣಿಸಿ' ಎಂದು ನ್ಯಾಯಪೀಠಕ್ಕೆ ಹೇಳಿದರು.
'ಎಸ್‌ಸಿಬಿಎ ಸಲ್ಲಿಸಿದ್ದ ಅರ್ಜಿಯಿಂದಾಗಿಯೇ ಸುಪ್ರೀಂಕೋರ್ಟ್‌ಗೆ ಅಪ್ಪು ಘರ್ ಜಮೀನು ಲಭಿಸಿದೆ. ಆದರೆ, ಇಷ್ಟ ಇರದಿದ್ದರೂ ಸಂಘಕ್ಕೆ ಕೇವಲ ಒಂದು ಬ್ಲಾಕ್ ಅನ್ನು ಮಾತ್ರ ನೀಡಲಾಗಿದೆ. ಆಗಿನ ಸಿಜೆಐ ಎನ್.ವಿ.ರಮಣ ಅವರ ಅವಧಿಯಲ್ಲಿಯೇ ಸಂಘದ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಬೇಕಿತ್ತು' ಎಂದು ವಿಕಾಸ್ ಸಿಂಗ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್, 'ನೀವು ಈ ರೀತಿ ಜಮೀನಿಗೆ ಬೇಡಿಕೆ ಇಡಬಾರದು. ನೀವು ಒಂದು ದಿನ ನಿಗದಿ ಮಾಡಿ. ನಾವು ಆ ಇಡೀ ದಿನ ಬೇರೆ ಕೆಲಸವಿಲ್ಲದೇ ಕುಳಿತುಕೊಳ್ಳುತ್ತೇವೆ' ಎಂದರು.
ಇದಕ್ಕೆ, 'ನೀವು ಇಡೀ ದಿನ ಸುಮ್ಮನೆ ಕುಳಿತಿರುತ್ತೀರಿ ಎಂದು ನಾನು ಹೇಳುತ್ತಿಲ್ಲ. ಅರ್ಜಿಯನ್ನು ವಿಚಾರಣೆ ಪಟ್ಟಿಗೆ ಸೇರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ನನ್ನ ಪ್ರಯತ್ನ ಫಲ ನೀಡದಿದ್ದರೆ, ಆಗ ನಾನು ನಿಮ್ಮ ಮನೆ ಬಾಗಿಲಿಗೆ ಬಂದು ನ್ಯಾಯ ಕೇಳುತ್ತೇನೆ. ಆದರೆ, ವಕೀಲರ ಸಂಘವನ್ನು ಈ ರೀತಿ ನಡೆಸಿಕೊಳ್ಳುವುದು ನನಗೆ ಬೇಕಿಲ್ಲ' ಎಂದು ವಿಕಾಸ್ ಸಿಂಗ್ ಪ್ರತಿಕ್ರಿಯಿಸಿದರು.
ಈ ಮಾತಿಗೆ ಗರಂ ಆದ ಸಿಜೆಐ ಚಂದ್ರಚೂಡ್, 'ನೀವು ಮುಖ್ಯನ್ಯಾಯಮೂರ್ತಿಯನ್ನು ಈ ರೀತಿ ಬೆದರಿಸಬೇಡಿ. ವರ್ತಿಸುವ ರೀತಿಯೇ ಇದು? ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸುವುದಿಲ್ಲ. ದಯವಿಟ್ಟು ಕೊಠಡಿಯಿಂದ ಹೊರನಡೆಯಿರಿ' ಎಂದು ಗದರಿದರು.
'ಸುಪ್ರೀಂಕೋರ್ಟ್‌ಗೆ ನೀಡಿರುವ ನಿವೇಶನವನ್ನು ವಕೀಲರ ಸಂಘಕ್ಕೆ ನೀಡುವಂತೆ ನೀವು ಕೇಳುತ್ತಿದ್ದೀರಿ. ನನ್ನ ನಿರ್ಧಾರವನ್ನು ಹೇಳಿಯಾಯಿತು. ಈ ಕುರಿತ ಅರ್ಜಿಯ ವಿಚಾರಣೆಯನ್ನು ಮಾರ್ಚ್ 17ಕ್ಕೆ ನಡೆಸಲಾಗುವುದು. ಇದನ್ನು ವಿಚಾರಣಾ ಪಟ್ಟಿಗೆ ಸೇರಿಸುವುದಿಲ್ಲ' ಎಂದು ಸಿಜೆಐ ಸ್ಪಷ್ಟಪಡಿಸಿದರು.