ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಆರೋಪ ಕುರಿತು ನಿಯಂತ್ರಕ ಸಂಸ್ಥೆ ಸೆಬೆ ತನಿಖೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಜನವರಿ 24 ಮತ್ತು ಮಾರ್ಚ್ 1 ರ ನಡುವೆ ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯಗಳು ಮಾರುಕಟ್ಟೆಯಲ್ಲಿ ಶೇ.60 ರಷ್ಟು ಕುಸಿತ ಕಂಡಿರುವ ಆರೋಪವಿದೆ. ಈ ಕಂಪನಿಗಳ ಷೇರುಗಳಲ್ಲಿನ ಏರಿಳಿತವು ವ್ಯವಸ್ಥಿತ ಮಟ್ಟದಲ್ಲಿ ಯಾವುದೇ ಮಹತ್ವದ ಪರಿಣಾಮ ಬೀರಿಲ್ಲ, ಇದೇ ಅವಧಿಯಲ್ಲಿ ನಿಫ್ಟಿ 50 ಶೇ.4.5ರಷ್ಟು ಕುಸಿದಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎನ್ನುವುದು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ. ಹೂಡಿಕೆದಾರರ ರಕ್ಷಣೆ ಸೇರಿದಂತೆ ಸೆಕ್ಯುರಿಟೀಸ್ ಮಾರುಕಟ್ಟೆಗಳ ಸ್ಥಿರ ಕಾರ್ಯಾಚರಣೆ ಮತ್ತು ಅಭಿವೃದ್ಧಿ ಮೇಲೆ ಪರಿಣಾಮ ಬೀರುವ ಹಲವಾರು ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರುವ ಮೂಲಕ ಮತ್ತು ಹೂಡಿಕೆ-ಸಂಬಂಧಿತ ಮಾರ್ಗಸೂಚಿಗಳನ್ನು ರೂಪಿಸುವ ಮೂಲಕ ಸುರಕ್ಷಿತ ಹೂಡಿಕೆ ವಾತಾವರಣವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಮಾರುಕಟ್ಟೆ ಆರೋಪಗಳ ತನಿಖೆಯನ್ನು ಸೆಬಿ ಕೈಗೊಳ್ಳುತ್ತಿದೆ. ಅದಾನಿ ಗ್ರೂಪ್‌ನ ಭಾಗವಾಗಿರುವ ಒಂಬತ್ತು ಕಂಪನಿಗಳು ಜನವರಿ 24, 2023 ರಿಂದ ಮಾರ್ಚ್ 1, 2023 ರವರೆಗೆ ಷೇರು ಮಾರುಕಟ್ಟೆಯಲ್ಲಿ ಶೇ. 60 ರಷ್ಟು ಕುಸಿತ ಕಂಡಿವೆ ಎಂದು ಹಿಂಡೆನ್ ಬರ್ಗ್ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ ಎಂದು ಚೌಧರಿ ಹೇಳಿದರು.
ಯುಎಸ್ ಮೂಲದ ಕಿರು ಮಾರಾಟಗಾರ ಹಿಂಡೆನ್‌ಬರ್ಗ್ ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಮೋಸದ ವಹಿವಾಟುಗಳು ಮತ್ತು ಷೇರು-ಬೆಲೆಯ ಕುಶಲತೆ ಸೇರಿದಂತೆ ಆರೋಪಗಳನ್ನು ಮಾಡಲಾಗಿತ್ತು. ಅದರ ನಂತರ ಅದಾನಿ ಸಮೂಹ ಕಂಪನಿಗಳ ಷೇರುಗಳಿಗೂ ಹೊಡೆತ ಬಿದ್ದಿತ್ತು. ಆದರೆ, ಈ ವರದಿಯನ್ನು ತಳ್ಳಿ ಹಾಕಿದ್ದ ಅದಾನಿ ಗ್ರೂಪ್ ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಬ್ಯಾಂಕ್‌ಗಳು ತಮ್ಮ ಬೋರ್ಡ್-ಅನುಮೋದಿತ ನೀತಿಗಳಲ್ಲಿ ಮತ್ತು ಆರ್‌ಬಿಐನ ವಿವೇಚನಾಶೀಲ ಮಾರ್ಗಸೂಚಿಗಳಲ್ಲಿ ಸಾಲದ ವಾಣಿಜ್ಯ ಕಾರ್ಯಸಾಧ್ಯತೆಯ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಕ್ರೆಡಿಟ್ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿವೆ ಎಂದು ಚೌಧರಿ ಹೇಳಿದರು.