ತಿರುವನಂತಪುರ: ವಸತಿ ಯೋಜನೆಯೊಂದರ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
ನಿರ್ಗತಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲು ಗುತ್ತಿಗೆ ಪಡೆದಿದ್ದ ಯುಎಇ ಮೂಲದ ನಿರ್ಮಾಣ ಸಂಸ್ಥೆಯೊಂದರಿಂದ ಶಿವಶಂಕರ್ ಅವರು ₹1 ಕೋಟಿ ಕಮಿಷನ್ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಯುಎಇ ರಾಯಭಾರ ಕಚೇರಿಗೆ ಸಂಬಂಧಿಸಿದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಹೊರಬಿದ್ದ ಬಳಿಕ ಈ ಭ್ರಷ್ಟಾಚಾರದ ಆರೋಪವೂ ಬೆಳಕಿಗೆ ಬಂದಿದೆ.
ಚಿನ್ನ ಕಳ್ಳಸಾಗಾಣಿಕೆ ಮೊಕದ್ದಮೆಗೆ ಸಂಬಂಧಿಸಿದಂತೆ ಶಿವಶಂಕರನ್ ಅವರನ್ನು ಆಮದು ಮತ್ತು ಜಾರಿ ನಿರ್ದೇಶನಾಲಯವು ಈ ಹಿಂದೆ ಬಂಧಿಸಿತ್ತು.
ಯುಎಇ ರಾಜತಾಂತ್ರಿಕ ಕಚೇರಿಯಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುವಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಕುಟುಂಬದ ಇಬ್ಬರು ಸದಸ್ಯರು, ಮಾಜಿ ಸಚಿವ ಕೆ.ಟಿ.ಜಲೀಲ್, ಮಾಜಿ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್, ಮುಖ್ಯಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಮತ್ತು ಕೆಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಚಿನ್ನ ಕಳ್ಳಸಾಗಾಣೆ ಮಾಡಿರುವ ಆರೋಪ ಹೊತ್ತಿರುವ ಸ್ವಪ್ನಾ ಸುರೇಶ್ ಜೊತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಆಪ್ತರು ನಡೆಸಿದ್ದಾರೆ ಎನ್ನಲಾದ ವಾಟ್ಸ್‌ಆಯಪ್ ಸಂದೇಶದ ತುಣುಕು ಇತ್ತೀಚೆಗೆ ಹೊರಬಿದ್ದಿತ್ತು.
ಸ್ವಪ್ನಾ ಅವರನ್ನು ಭೇಟಿಯಾಗಿದ್ದ ಕುರಿತ ಆರೋಪಗಳನ್ನು ವಿಜಯನ್ ಅವರು ನಿರಾಕರಿಸಿದ್ದ ಬೆನ್ನಲ್ಲೇ ಈ ಸಂಭಾಷಣೆ ತುಣುಕು ಬಹಿರಂಗವಾಗಿದ್ದವು.
ಮುಖ್ಯಮಂತ್ರಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶ್ರೀನಿವಾಸನ್ ಮತ್ತು ಸ್ವಪ್ನಾ ಅವರ ನಡುವೆ ಈ ಸಂಭಾಷಣೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕೇರಳ ಸರ್ಕಾರದ ಅನಿವಾಸಿ ಭಾರತೀಯರ ಕಲ್ಯಾಣ ಅಥವಾ ನೋರ್ಕಾ-ರೂಟ್ಸ್ ಸಂಸ್ಥೆಯಲ್ಲಿ ಸ್ವಪ್ನಾ ಅವರಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸುತ್ತಿರುವಾಗಿ ಶಿವಶಂಕರ್ ಅವರು ಹೇಳಿರುವುದು ಮತ್ತು ಸ್ವಪ್ನಾ ಅವರು ವಿಜಯನ್ ಅವರನ್ನು ಭೇಟಿಯಾಗಿದ್ದ ಕುರಿತಾದ ಮಾಹಿತಿಯು ಸಂಭಾಷಣೆಯಲ್ಲಿ ನಮೂದಾಗಿದೆ.