ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶನಿವಾರ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಆಶ್ರಯದಲ್ಲಿ 2 ದಿನ ನಡೆಯುವ “ ಕೃಷಿ ಬದುಕಿನ ಪಾಠ ಶಿಬಿರ” ವನ್ನು ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಈ ಸಂದರ್ಭ ತಮ್ಮ ಆಶೀರ್ವಚನದಲ್ಲಿ “ಜೈ ಜವಾನ್-ಜೈ ಕಿಸಾನ್ ಘೋಷ ವಾಕ್ಯದಂತೆ ಸೈನ್ಯ ಮತ್ತು ಕೃಷಿಕರನ್ನು ಬಲಿಷ್ಠಗೊಳಿಸುವುದರ ಮೂಲಕ ದೇಶವನ್ನು ಸಶಕ್ತಗೊಳಿಸೋಣ” ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಶ್ರೀ ಎಂ. ಮುರಳೀಧರ ಶೆಟ್ಟಿಯವರು ನಿಮ್ಮ ಆಹಾರ ನೀವು ಬೆಳೆದು ಆರೋಗ್ಯವಾಗಿರಿ ಎಂದರು.
ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥ ಶಶಿಧರ ಶೆಟ್ಟಿ ಗ್ರಾಮಚಾವಡಿಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಸಾವಯವ ಕೃಷಿಕ ಗ್ರಾಹಕ ಬಳಗದ ಗೌರವ ಸಲಹೆಗಾರ, ಕ.ಸಾ.ಪ.ದ ದ.ಕ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ರವರು ಶಿಬಿರದ ಯಶಸ್ಸಿಗೆ ಶುಭ ಕೋರಿದರು. ಕು.ಮಂಜುಳಾ ಮತ್ತು ಕು. ದೇವಿಕಾ ಪ್ರಾರ್ಥನೆ, ಶಿಬಿರ ಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾವಯವ ಬಳಗದ ಅಧ್ಯಕ್ಷ ಶ್ರೀ ಜಿ.ಆರ್ ಪ್ರಸಾದ್ ರವರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀ ರತ್ನಾಕರ ಕುಳಾಯಿಯವರು ಪ್ರಾಸ್ತಾವಿಕ ಮತ್ತು ವಂದನಾರ್ಪಣೆ ನಡೆಸಿ ಕೊಟ್ಟರು. ಬಳಗದ ಸದಸ್ಯ ಶ್ರೀ ಹರಿಕೃಷ್ಣ ಕಾಮತ್ ಉಪಸ್ಥಿತರಿದ್ದರು. ಗಂಗಾಧರ ಕೊಂಡೆವೂರು ನಿರೂಪಣೆಗೈದರು.
ಇಂದು(5.03.) ಸಂಜೆವರೆಗೆ ನಡೆಯುವ ಈ ಶಿÉಬಿರದಲ್ಲಿ ಶ್ರಮ ಜೀವನ, ತಿನ್ನುವ ಆಹಾರವೇ ಔಷಧವಾಗಿರಲಿ, ಆಹಾರದಲ್ಲಿ ವಿಷ, ಗೋವಿನಿಂದ ಆರೋಗ್ಯ ಹಾಗೂ ಸಣ್ಣ ಕೃಷಿಯಲ್ಲಿ ಉದ್ಯಮಶೀಲತೆ ಅವಕಾಶ ಮುಂತಾದ ವಿಷಯಗಳ ಕುರಿತು ಆಯಾಯ ಕ್ಷೇತ್ರ ತಜ್ಞರಿಂದ ಉಪನ್ಯಾಸ ಮತ್ತು ಸಂವಾದ ನಡೆಯುತ್ತಿದೆ. ಕೈತೋಟದ ಸಲಕರಣೆಗಳ ಮಾಹಿತಿ, ಸಾವಯವ ಆಹಾರ ಪದಾರ್ಥ ಗುರುತಿಸುವ, ಅಗ್ನಿಹೋತ್ರ, ಪ್ರಾತ್ಯಕ್ಷಿಕೆಗಳೂ ನಡೆಯಲಿವೆ. ಕಾಸರಗೋಡು ಜಿಲ್ಲೆ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ವಿಶಿಷ್ಟ ಶಿಬಿರದ ಪ್ರಯೋಜನ ಪಡಕೊಳ್ಳುತ್ತಿದ್ದಾರೆ.