ನವದೆಹಲಿ: 'ನಿರ್ದಿಷ್ಟ ಚೌಕಟ್ಟಿನ ಆಚೆಗಿನ ಚಿಂತನೆ ಹಾಗೂ ದೂರಗಾಮಿ ಯೋಜನೆಗಳು ಪ್ರವಾಸೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಶುಕ್ರವಾರ ನಡೆದ 'ಡೆವಲಪಿಂಗ್ ಟೂರಿಸಂ ಇನ್ ಮಿಷನ್ ಮೋಡ್' ಕುರಿತ ಬಜೆಟ್ ನಂತರದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, 'ದೇಶದ ವಿವಿಧ ಮೂಲೆಗಳಲ್ಲಿರುವ ಹಳ್ಳಿಗಳೂ ಈಗ ಪ್ರವಾಸೋದ್ಯಮದ ಭೂಪಟದೊಳಗೆ ಸೇರ್ಪಡೆಯಾಗಿವೆ.
ಭಾರತವು ಈಗ ಹೊಸ ಕೆಲಸದ ಸಂಸ್ಕೃತಿಯತ್ತ ಹೆಜ್ಜೆ ಇಟ್ಟಿದೆ' ಎಂದಿದ್ದಾರೆ.
'ನಮ್ಮ ಸರ್ಕಾರವು ಬಜೆಟ್ ಪೂರ್ವ ಹಾಗೂ ಬಜೆಟ್ ನಂತರದಲ್ಲಿ ಎಲ್ಲಾ ಪಾಲುದಾರರ ಜೊತೆಗೂ ಬೆರೆಯಲು ಹಾಗೂ ಅವರ ಜೊತೆ ಕೆಲಸ ಮಾಡಲು ಪ್ರಯತ್ನಿಸುತ್ತದೆ' ಎಂದು ಅವರು ಹೇಳಿದ್ದಾರೆ.
'ಧಾರ್ಮಿಕ ಕ್ಷೇತ್ರಗಳ ಪುನಶ್ಚೇತನವು ಪ್ರವಾಸೋದ್ಯಮ ಮತ್ತೊಂದು ಮಗ್ಗುಲಿಗೆ ಹೊರಳುವಂತೆ ಮಾಡಿದೆ. ಈ ಹಿಂದೆ ವಾರಾಣಸಿಯ ಕಾಶಿ ವಿಶ್ವನಾಥ ಧಾಮಕ್ಕೆ ವರ್ಷದಲ್ಲಿ ಸುಮಾರು 70 ಲಕ್ಷದಿಂದ 80 ಲಕ್ಷ ಮಂದಿ ಭೇಟಿ ನೀಡುತ್ತಿದ್ದರು. ದೇವಸ್ಥಾನವನ್ನು ನವೀಕರಣಗೊಳಿಸಿದ ಬಳಿಕ ಹೋದ ವರ್ಷ ಒಟ್ಟು 7 ಕೋಟಿ ಮಂದಿ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕೇದಾರ್‌ಘಾಟಿಯ ನವೀಕರಣದ ಬಳಿಕ 15 ಲಕ್ಷ ಮಂದಿ ಅಲ್ಲಿಗೆ ತೆರಳಿ ಬಾಬಾ ಕೇದಾರನಾಥರ ದರ್ಶನ ಪಡೆದಿದ್ದಾರೆ. ಅದಕ್ಕೂ ಮುನ್ನ 4 ಲಕ್ಷದಿಂದ 5 ಲಕ್ಷ ಮಂದಿ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು' ಎಂದು ತಿಳಿಸಿದ್ದಾರೆ.
'ಪ್ರವಾಸೋದ್ಯಮವೆಂಬುದು ತುಂಬಾ ಹಳೆಯ ಪರಿಕಲ್ಪನೆ. ಈಗ ಚಾರ್‌ಧಾಮ, ದ್ವಾದಶ ಜ್ಯೋತಿರ್ಲಿಂಗ, 51 ಶಕ್ತಿಪೀಠ ಹೀಗೆ ಹಲವು ಯಾತ್ರೆಗಳು ನಡೆಯುತ್ತಿರುತ್ತವೆ. ಹಲವು ಸವಾಲುಗಳ ನಡುವೆಯೂ ಭಕ್ತರು ಇಂತಹ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ. ದೇಶದಲ್ಲಿ ಏಕತೆಯನ್ನು ಇನ್ನಷ್ಟು ಬಲಗೊಳಿಸಲು ಯಾತ್ರೆಗಳು ಸಹಕಾರಿಯಾಗಿವೆ. ದೇಶದ ಹಲವು ದೊಡ್ಡ ನಗರಗಳ ಆರ್ಥಿಕತೆಯು ಇಂತಹ ಯಾತ್ರೆಗಳ ಮೇಲೆ ಅವಲಂಬಿತವಾಗಿದೆ' ಎಂದಿದ್ದಾರೆ.