ಅಯೋಧ್ಯಾ: ಅಯೋಧ್ಯೆಯಲ್ಲಿ ಧಾನ್ನಿಪುರ್ ಮಸೀದಿ ನಿರ್ಮಾಣ ಯೋಜನೆಗೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಅಂತಿಮ ಅನುಮೋದನೆ ನೀಡಿದೆ.
ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಮಸೀದಿಯನ್ನು ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವು ಐದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ.
ಮಸೀದಿಯ ಜೊತೆಗೆ ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆಮನೆ, ಗ್ರಂಥಾಲಯವನ್ನು ನಿರ್ಮಾಣ ಮಾಡಲು ಇಂಡೊ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಷನ್ (ಐಐಸಿಎಫ್) ನಿರ್ಧರಿಸಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ಎಡಿಎ) ಅನುಮೋದನೆ ನೀಡುವುದು ವಿಳಂಬ ಮಾಡಿದ್ದರಿಂದಾಗಿ ನಿರ್ಮಾಣ ಚಟುವಟಿಕೆ ಇದುವರೆಗೂ ಆರಂಭವಾಗಿರಲಿಲ್ಲ.
'ಮಸೀದಿ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಅನುಮೋದನೆ ಪಡೆದ ನಕ್ಷೆಯನ್ನು ಐಐಸಿಎಫ್ ಪ್ರತಿನಿಧಿಗಳಿಗೆ ನೀಡಲಾಗುವುದು' ಎಂದು ಎಡಿಎನ ಹೆಚ್ಚುವರಿ ಆಯುಕ್ತ ಗೌರವ್ ದಯಾಳ್ ತಿಳಿಸಿದರು.
ಐಐಸಿಎಪ್ ಕಾರ್ಯದರ್ಶಿ ಅತ್ತಾರ್ ಹುಸೇನ್ ಅವರು, ಮಂಜೂರಾತಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮಸೀದಿ ನಿರ್ಮಾಣ ಯೋಜನೆಗೆ ಅಂತಿಮರೂಪ ನೀಡಲು ಟ್ರಸ್ಟ್ ಸಭೆ ನಡೆಸಲಿದೆ ಎಂದು ತಿಳಿಸಿದರು.
ಮಸೀದಿ ನಿರ್ಮಿಸಲು ಜನವರಿ 26, 2021ರಂದು ಶಂಕುಸ್ಥಾಪನೆ ಮಾಡಲಾಗಿತ್ತು. ಭಾರತದ ಸಂವಿಧಾನವು ಜಾರಿಗೆ ಬಂದ ದಿನವಾದ ಕಾರಣ ಆ ದಿನದಂದೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ತಿಳಿಸಿದರು.