ಮುಂಬೈ: ರೈತರು ಮತ್ತು ಬುಡಕಟ್ಟು ಜನಾಂಗದವರು ನಾಸಿಕ್‌ನಿಂದ ಮುಂಬೈವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಸರ್ಕಾರದ ಆಶ್ವಾಸನೆ ಮೇರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ನಿರ್ದಿಷ್ಟ ಕ್ರಮ ಕೈಗೊಳ್ಳದಿದ್ದರೆ ಮುಂಬೈಗೆ ತೆರಳುವುದು ಖಚಿತ ಎಂದು ಸಿಪಿಎಂ ಶಾಸಕ ವಿನೋದ್ ನಿಕೋಲೆ ಶುಕ್ರವಾರ ಹೇಳಿದ್ದಾರೆ.
ಈರುಳ್ಳಿ ರೈತರಿಗೆ ಕ್ವಿಂಟಾಲ್‌ಗೆ ₹ 600 ಪರಿಹಾರ, ರೈತರಿಗೆ 12 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮತ್ತು ಕೃಷಿ ಸಾಲ ಮನ್ನಾ - ಈ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲು ರೈತರು ಈ ಸುದೀರ್ಘ ಪಾದಯಾತ್ರೆ ಕೈಗೊಂಡಿದ್ದರು. ಪಕ್ಷದ ಕಾರ್ಯಕರ್ತ ಮತ್ತು ಮಾಜಿ ಶಾಸಕ ಜಾವಾ ಗವಿತ್ ಅವರ ನೇತೃತ್ವದಲ್ಲಿ ಸಾವಿರಾರು ರೈತರೊಂದಿಗೆ ಪಾದಯಾತ್ರೆ ಕೈಗೊಂಡಿದ್ದು ಮುಂಬೈನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ವಸಿಂದ್‌ಗೆ ಈ ಪಾದಯಾತ್ರೆ ಶುಕ್ರವಾರ ತಲುಪಿದೆ.
' ಬೇಡಿಕೆ ಈಡೇರಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಆದೇಶ ನೀಡುವವರೆಗೂ ರೈತರು ವಸಿಂದ್‌ನಲ್ಲೇ ಇರುತ್ತಾರೆ' ಎಂದಿದ್ದಾರೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ರೈತ ಪ್ರತಿನಿಧಿಗಳೊಂದಿಗೆ ನಡೆದ ಚರ್ಚೆ ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.