ನವದೆಹಲಿ: 'ಕೇಂದ್ರ ಗೃಹ ಸಚಿವಾಲಯವು ಕಾನೂನು ಉಲ್ಲಂಘನೆ ಆರೋಪದ ಮೇಲೆ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಸ್ವಯಂ ಸೇವಾ ಸಂಸ್ಥೆಗೆ (ಎನ್‌ಜಿಒ) ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿಯಲ್ಲಿ ನೀಡಲಾಗಿದ್ದ ಪರವಾನಗಿಯನ್ನು ಆರು ತಿಂಗಳ ಮಟ್ಟಿಗೆ ಅಮಾನತು ಮಾಡಿದೆ' ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸಿಪಿಆರ್, ದೇಶದ ಪ್ರಮುಖ ವಿಚಾರ ವೇದಿಕೆ ಎಂದೇ ಗುರುತಿಸಿಕೊಂಡಿದೆ. ಪರವಾನಗಿ ಅಮಾನತು ಮಾಡಿರುವುದರಿಂದ ಇನ್ನು ಮುಂದೆ ಈ ಸಂಸ್ಥೆಯು ವಿದೇಶದಿಂದ ಯಾವುದೇ ರೀತಿಯ ದೇಣಿಗೆ ಸ್ವೀಕರಿಸಲು ಸಾಧ್ಯವಿಲ್ಲ.
ಅರ್ಥಶಾಸ್ತ್ರಜ್ಞರಾಗಿದ್ದ ಪೈ ಪನಿಂಡಿಕರ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿವಂಗತ ವೈ.ವಿ.ಚಂದ್ರಚೂಡ್ ಅವರು ಈ ಸಂಸ್ಥೆಯ ಸ್ಥಾಪಕರು ಎಂದು ಸಿಪಿಆರ್‌ನ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
' ಈ ಸಂಸ್ಥೆಯು ಬಿಲ್ ಆಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ದಿ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಮತ್ತು ಡ್ಯೂಕ್ ವಿಶ್ವವಿದ್ಯಾಲಯದಿಂದ ದೇಣಿಗೆ ಸ್ವೀಕರಿಸುತ್ತಿತ್ತು' ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆದಾಯ ತೆರಿಗೆ ಇಲಾಖೆಯು ಸಿಪಿಆರ್ ಮತ್ತು ಆಕ್ಸ್‌ಫಮ್ ಇಂಡಿಯಾ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಇಲಾಖೆಯು ಸಿಪಿಆರ್‌ಗೆ ಹಲವು ನೋಟಿಸ್‌ಗಳನ್ನೂ ಜಾರಿಗೊಳಿಸಿತ್ತು.
'ಸಂಸ್ಥೆಯು ತನಿಖಾ ಸಂಸ್ಥೆಗೆ ಎಲ್ಲಾ ಬಗೆಯ ಸಹಕಾರ ನೀಡಲಿದೆ. ಕಾನೂನಿಗೆ ವಿರುದ್ಧವಾಗಿ ನಾವು ಯಾವ ಚಟುವಟಿಕೆಯನ್ನು ಕೈಗೊಂಡಿಲ್ಲ' ಎಂದು ಸಿಪಿಆರ್, ಪ್ರಕಟಣೆಯಲ್ಲಿ ತಿಳಿಸಿದೆ.