ಹೋಶಿಯಾರ್‌ಪುರ : ಸಿಖ್ ಮೂಲಭೂತವಾದಿ ಪ್ರಚಾರಕ ಅಮೃತಪಾಲ್ ಸಿಂಗ್ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ, ಕೆಲ ಶಂಕಿತ ವ್ಯಕ್ತಿಗಳು ತಮ್ಮ ಕಾರುಗಳನ್ನು ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮವೊಂದರಲ್ಲಿ ಗುರುವಾರ ಡ್ರೋನ್ ನಿಯೋಜನೆ ಮಾಡಿದ್ದಾರೆ.
ಹೋಶಿಯಾರ್‌ಪುರ ಜಿಲ್ಲೆಯ ಮರ್ನಿಯಾ ಗ್ರಾಮದಲ್ಲಿ ಡ್ರೋನ್ ನಿಯೋಜಿಸುವ ಮೂಲಕ ಶೋಧ ಕಾರ್ಯವನ್ನು ಚುರುಕುಗೊಳಿಸಿರುವ ಪೊಲೀಸರು, ಗ್ರಾಮದ ಮೂಲಕ ಹಾದು ಹೋಗುತ್ತಿರುವ ವಾಹನಗಳನ್ನು ಸಹ ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ, ಡ್ರೋನ್ ನಿಯೋಜನೆ ಮಾಡಿರುವ ಕುರಿತು ಪೊಲೀಸ್ ಇಲಾಖೆಯು ಅಧಿಕೃತ ಮಾಹಿತಿ ನೀಡಿಲ್ಲ.
ಗ್ರಾಮದ ಒಳಗೆ ಹಾಗೂ ಸುತ್ತಮುತ್ತ ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ.
ಅಮೃತಪಾಲ್ ಸಿಂಗ್ ಹಾಗೂ ಆತನ ಸಹಚರರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರೊಂದನ್ನು ಮಂಗಳವಾರ ರಾತ್ರಿ ಬೆನ್ನಟ್ಟಿದ್ದರು. ಆದರೆ, ಕಾರನ್ನು ಗ್ರಾಮದ ಬಳಿಯೇ ಬಿಟ್ಟು, ಅದರಲ್ಲಿದ್ದವರು ಪರಾರಿಯಾಗಿದ್ದರು ಎಂದು ಮೂಲಗಳು ಹೇಳಿವೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಡ್ರೋನ್ ನಿಯೋಜಿಸಿದ್ದಾರೆ ಎನ್ನಲಾಗಿದೆ.