ನೊಯಿಡಾ: ಭಾರತದ ಔಷಧಿ ತಯಾರಿಕಾ ಕಂಪನಿ ಮ್ಯಾರಿಯೊನ್ ಬಯೋಟೆಕ್‌ನ ಕೆಮ್ಮಿನ ಔಷಧ 'ಡಾಕ್-1-ಮ್ಯಾಕ್ಸ್' ಸೇವಿಸಿ ಉಜ್ಬೇಕಿಸ್ತಾನದಲ್ಲಿ ಡಿಸೆಂಬರ್‌ನಲ್ಲಿ 18 ಮಕ್ಕಳು ಮೃತಪಟ್ಟ ಹಿನ್ನಲೆಯಲ್ಲಿ ಕಂಪನಿಯ ಪರವಾನಗಿ ರದ್ದುಗೊಳಿಸುವ ಪ್ರಕ್ರಿಯೆ ಶುರುವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
'ಮ್ಯಾರಿಯೊನ್ ಬಯೋಟೆಕ್ ಕಂಪನಿಯ ಔಷಧ ಪರವಾನಗಿ ರದ್ದುಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದಾಖಲೆಗಳು ಪ್ರಗತಿಯಲ್ಲಿವೆ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಸಂಸ್ಥೆಯ ಎಲ್ಲಾ ಉತ್ಪಾದನೆಯನ್ನು ಜನವರಿಯಲ್ಲಿಯೇ ಸ್ಥಗಿತಗೊಳಿಸಲಾಗಿತ್ತು. ಈಗ ಅದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ' ಎಂದು ಗೌತಮ ಬುದ್ಧ ನಗರದ ಔಷಧ ನಿರೀಕ್ಷಕ ವೈಭವ್ ಬಾಬರ್ ಹೇಳಿದ್ದಾರೆ.
ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ಸೆಕ್ಟರ್ 67ರಲ್ಲಿ ಔಷಧಿ ತಯಾರಿಕೆ ಹಾಗೂ ಇತರ ಚಟುವಟಿಕೆಗಳನ್ನು ಸಹ ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಲಬೆರಕೆ ಔಷಧಿಗಳ ತಯಾರಿಕೆ ಮತ್ತು ಮಾರಾಟದ ಆರೋಪದ ಮೇಲೆ ಎಫ್‌ಐಆರ್ ದಾಖಲಾದ ನಂತರ ಸ್ಥಳೀಯ ಪೊಲೀಸರು ಸಂಸ್ಥೆಯ ಮೂವರು ಹಿರಿಯ ಉದ್ಯೋಗಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಕಂಪನಿಯ ಇಬ್ಬರು ನಿರ್ದೇಶಕರು ಇನ್ನೂ ಸಿಕ್ಕಿಲ್ಲ.
ಮಕ್ಕಳ ಸಾವಿನ ಸಂಬಂಧ ತನಿಖೆ ಪ್ರಾರಂಭಿಸಿದ್ದ ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ), ಚಂಡೀಗಢದಲ್ಲಿರುವ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯಕ್ಕೆ (ಆರ್‌ಡಿಟಿಎಲ್) ಕಳುಹಿಸಲಾಗಿದ್ದ 32 ಔಷಧದ ಮಾದರಿಗಳ ಪೈಕಿ 22 ಗುಣಮಟ್ಟದ್ದಲ್ಲ (ಕಲಬೆರಕೆ ಮತ್ತು ನಕಲಿ) ಎಂದು ವರದಿ ತಿಳಿಸಿತ್ತು.
'ಒಟ್ಟು 21 ಮಕ್ಕಳು ಈ ಔಷಧ ಸೇವಿಸಿದ್ದು, 18 ಮಕ್ಕಳು ಸಾವಿಗೀಡಾಗಿದ್ದಾರೆ. ಈ ಔಷಧದಲ್ಲಿ ಎಥೆನೀಲ್ ಗ್ಲೈಕೋಲ್ ಎನ್ನುವ ರಾಸಾಯನಿಕ ಅಂಶವಿದೆ. ಇದು ಜೀವಕ್ಕೆ ಹಾನಿಕರವಾಗಿದೆ' ಎಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿತ್ತು.