ಚಂಡೀಗಡ: ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಕೋಮು ಸಂಘರ್ಷ ಹರಡಲು ಯತ್ನಿಸಿದ್ದ ಆರೋಪದಡಿ, ಖಾಲಿಸ್ತಾನ ಪರ ಸಹಾನೂಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಅಮೃತ್‌ಪಾಲ್ ಸಿಂಗ್ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಈಗಾಗಲೇ ಆತನ ಸಂಘಟನೆ ಜೊತೆಗಿದ್ದ 78 ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ತಪ್ಪಿಸಿಕೊಂಡಿರುವ ಅಮೃತ್‌ಪಾಲ್ ಸಿಂಗ್ ಪತ್ತೆಗಾಗಿ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ರಾಜ್ಯವ್ಯಾಪಿ ಶೋಧ ನಡೆಸುತ್ತಿದ್ದಾರೆ. ನಡೆದಿತ್ತು. ಈ ನಡುವೆ, ಜಲಂಧರ್ ಜಿಲ್ಲೆಯಲ್ಲಿ ಆತನ ಬೆಂಗಾವಲು ವಾಹನ ಪತ್ತೆಯಾಗಿದ್ದು, ಅದರಲ್ಲಿ ರೈಫಲ್, ಕ್ಯಾಟ್ರಿಡ್ಜ್‌ಗಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ತೆಯಾಗಿರುವ ಕಾರು ಅಮೃತ್‌ಪಾಲ್ ಸಿಂಗ್‌ನ ಬೆಂಗಾವಲು ಪಡೆ ವಾಹನವಿರಬಹುದು ಎಂದು ಶಂಕಿಸಲಾಗಿದೆ. ಅದರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಜಲಂಧರ್‌ನ ಸಲೆಮಾ ಗ್ರಾಮದಲ್ಲಿ ವಾಹನ ಪತ್ತೆಯಾಗಿದ್ದು, ಕೀ ವಾಹನದಲ್ಲಿಯೇ ಇತ್ತು. ಖಾಸಗಿ ವಾಕಿ-ಟಾಕಿ, ಪಾಯಿಂಟ್ 315 ಬೋರ್ ರೈಫಲ್, 57 ಕ್ಯಾಟ್ರಿಡ್ಜ್‌ಗಳು, ಕತ್ತಿ, ನೋಂದಣಿ ಫಲಕ ಮತ್ತಿತರ ಪರಿಕರಗಳಿದ್ದವು' ಎಂದು ಪೊಲೀಸರು ಹೇಳಿದ್ದಾರೆ.
ಅಮೃತ್‌ಪಾಲ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಆತನ ನೇತೃತ್ವದ 'ವಾರಿಸ್ ಪಂಜಾಬ್ ದೇ' (ಡಬ್ಲ್ಯುಪಿಡಿ) ಸಂಘಟನೆಗೆ ಸೇರಿದ ಶಕ್ತಿಗಳು ಕೋಮುಸೌಹಾರ್ದಕ್ಕೆ ಧಕ್ಕೆ ತರಲು ಯತ್ನಿಸಿದ್ದ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ದೂರುಗಳು ದಾಖಲಾಗಿವೆ.
ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸಂಬಂಧ ಅಮೃತ್‌ಪಾಲ್ ಸಿಂಗ್ ಮತ್ತು ಆತನ ಏಳು ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.