ನವದೆಹಲಿ :ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವೆ ಪ್ರತಿಮಾ ಭೌಮಿಕ್, ತ್ರಿಪುರಾದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಿಎಂ ಮಾಣಿಕ್ ಸರ್ಕಾರ್ ಅವರು 1998ರ ಮಾರ್ಚ್‌ನಿಂದ 2023ರ ಮಾರ್ಚ್‌ವರೆಗೆ ಪ್ರತಿನಿಧಿಸುತ್ತಿದ್ದ ಎಡಪಕ್ಷಗಳ ಭದ್ರಕೋಟೆ ಎನಿಸಿದ್ದ ಧನಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಭೌಮಿಕ್, ಸಿಎಂ ಗಾದಿಗೇರಿದಲ್ಲಿ ಈಶಾನ್ಯ ರಾಜ್ಯಗಳ ಮೊದಲ ಮಹಿಳಾ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಶೇಕಡ 39ರಷ್ಟು ಮತಗಳೊಂದಿಗೆ 32 ಸ್ಥಾನಗಳನ್ನು ಗೆದ್ದಿದೆ. ತಿಪ್ರಾ ಮೊಹ್ತ ಪಕ್ಷ 13 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸಿಪಿಎಂ 11 ಹಾಗೂ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಜಯ ಸಾಧಿಸಿವೆ. ಐಪಿಎಫ್‌ಟಿ ಒಂದು ಸ್ಥಾನ ಪಡೆದಿದೆ.
ಧನಪುರ ಕ್ಷೇತ್ರದಲ್ಲಿ ಚಲಾಯಿತ ಮತಗಳ ಪೈಕಿ 19148 ಮತಗಳನ್ನು ಅಂದರೆ ಶೇಕಡ 4225ರಷ್ಟು ಮತ ಪಡೆದ ಭೌಮಿಕ್, ತ್ರಿಪುರಾದ ದೀದಿ ಎಂದೇ ಜನಪ್ರಿಯ. 1998 ಹಾಗೂ 2018ರಲ್ಲಿ ಮಾಣಿಕ್ ಸರ್ಕಾರ್ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ಸಿಪಿಐಎಂನ ಕೌಶಕ್ ಚಂದ ಅವರನ್ನು 3500 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸರ್ಕಾರ್ ಈ ಬಾರಿ ಸ್ಪರ್ಧಿಸಿರಲಿಲ್ಲ.
ಸಿಎಂ ಕುರ್ಚಿಗೆ ಭೌಮಿಕ್ ಹೆಸರು ಬಲವಾಗಿ ಕೇಳಿ ಬರುತ್ತಿರುವ ಬಗ್ಗೆ ಕೇಳಿದಾಗ, "ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತೆ. ಪಕ್ಷದಿಂದಾಗಿ ನಾನು ನಿಮ್ಮೆದುರು ಕುಳಿತಿದ್ದೇನೆ. ಪಕ್ಷದ ಸೂಚನೆಯಂತೆ ಸ್ಪರ್ಧಿಸಿದ್ದೆ. ಪಕ್ಷ ನನ್ನ ತಾಯಿ. ಆದ್ದರಿಂದ ಜನ ಏನು ಬೇಕಾದರೂ ಊಹಿಸಬಹುದು. ಪಕ್ಷ ಹೇಳಿದ್ದನ್ನು ಮಾಡುತ್ತೇನೆ" ಎಂದು ಪ್ರತಿಕ್ರಿಯಿಸಿದರು.
2019ರಲ್ಲಿ ಸಂಸತ್ತಿಗೆ ಆಯ್ಕೆಯಾದ ಬಳಿಕ 54 ವರ್ಷದ ಭೌಮಿಕ್ 2021ರ ಜುಲೈನಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಈ ಮೂಲಕ ಸಂಪುಟದಲ್ಲಿ ಸ್ಥಾನ ಪಡೆದ ಈಶಾನ್ಯ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಜ್ಞಾನ ಪದವೀಧರೆಯಾಗಿರುವ ಇವರು 1991ರಿಂದ ಬಿಜೆಪಿಯಲ್ಲಿದ್ದಾರೆ.
ಭೌಮಿಕ್ ಪಕ್ಷದ ಯುವ ಹಾಗೂ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರನ್ನು ಪಕ್ಷ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರಾಗಿದ್ದ ಶಂಕರ್ ಪ್ರಸಾದ್ ದತ್ತಾ ವಿರುದ್ಧ 3,05,689 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.