ನವದೆಹಲಿ (PTI): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆ ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಬುಧವಾರವೂ ಸುಗಮವಾಗಿ ನಡೆಯಲಿಲ್ಲ. ಗದ್ದಲದ ನಡುವೆಯೇ ಸ್ಪರ್ಧಾ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಸಿಕ್ಕಿತು.
ಲೋಕಸಭೆಯಲ್ಲಿ, ಕಪ್ಪು ದಿರಿಸಿನಲ್ಲಿ ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಪೀಠದ ಎದುರು ಘೋಷಣೆಗಳನ್ನು ಕೂಗಿದರು. ಅದಾನಿ ಸಮೂಹದ ಷೇರುಗಳ ಮೌಲ್ಯ ತಿರುಚಿದ ಆರೋಪವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಳಪಡಿಸಬೇಕು ಎಂದು ವಿರೋಧ ಪಕ್ಷಗಳ ಸಂಸದರು ಒತ್ತಾಯಿಸಿದರು. ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನವೂ ಗದ್ದಲ ಮುಂದುವರೆದ ಕಾರಣ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ಇದೇ ವಿಚಾರಗಳಿಗೆ
ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಗದ್ದಲದ ನಡುವೆಯೇ ಅರಣ್ಯ
ಸಂರಕ್ಷಣೆ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಗೆ ಸದಸ್ಯರನ್ನು ನೇಮಿಸುವ
ಗೊತ್ತುವಳಿಯನ್ನು ಮಂಡಿಸಲು ಸಚಿವ ಭೂಪೇಂದ್ರ ಯಾದವ್ ಅವರಿಗೆ ಸಭಾಪತಿ ಜಗದೀಪ್
ಸೂಚಿಸಿದರು. ಯಾದವ್ ಅವರು ಸದಸ್ಯರ ಹೆಸರನ್ನು ಪ್ರಕಟಿಸಿದರು. ಈ ಬಳಿಕ ಸದನವನ್ನು ಮುಂದೂಡ
ಲಾಯಿತು. ಗುರುವಾರ, ಶುಕ್ರವಾರ ರಜೆ ಇರುವ ಕಾರಣ, ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.