ಕೊಚ್ಚಿ: ಪಾಲಕ್ಕಾಡಿನಲ್ಲಿ ಸೆರೆಹಿಡಿಯಲಾದ ಎರಡು ಕಾಡಾನೆ ಹಾಗೂ ಐದು ಹುಲಿಗಳನ್ನು ಬಿಡುಗಡೆ ಮಾಡಬೇಕೆಂದು ಕೋರಿ ಕೇರಳ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಎರಡು ಅರ್ಜಿಗಳ ವಿಚಾರಣೆ ಶುಕ್ರವಾರ ನಡೆಯಲಿದೆ.
ಪೀಠದ ಎದುರು ಬಂದಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಮೂರ್ತಿ ಶಾಜಿ ಪಿ.
ಚಾಲೈ ಅವರು ಒಪ್ಪಿಗೆ ಸೂಚಿಸಿದ್ದಾರೆ. ಆನೆ ಮತ್ತು ಹುಲಿಗಳನ್ನು ಸೆರೆಹಿಡಿದಿರುವುದು 1972ರ ವನ್ಯಮೃಗ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅರ್ಜಿಯು ಪ್ರತಿಪಾದಿಸಿದೆ.
'ಅನಿಮಲ್ ಲೀಗಲ್ ಇಂಟಗ್ರೇಷನ್' ಎಂಬ ಎನ್‌ಜಿಒ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಏಂಜಲ್ ನಾಯರ್ ಹಾಗೂ ವನ್ಯಮೃಗ ಪ್ರೇಮಿ ಮಿನಿ ಸುಧೀಲ್ ಅವರು ಸಲ್ಲಿಸಿದ ಅರ್ಜಿ ಇದಾಗಿದೆ. ಇಲ್ಲಿ ಸೆರೆಸಿಕ್ಕ ಎರಡು ಆನೆಗಳಿಗೆ ಹಿಂಸೆಯ ಮೂಲಕ ಕಠಿಣ ತರಬೇತಿ ಕೊಟ್ಟು 'ಕುಮ್ಕಿ' ಆನೆಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಅರ್ಜಿದಾರರು ದೂರಿದ್ದಾರೆ.
ಕುಮ್ಕಿ ಆನೆಯನ್ನು ಕಾಡಿನಲ್ಲಿರುವ ಆನೆಗಳನ್ನು ಸೆರೆಹಿಡಿಯಲು ಹಾಗೂ ಪಳಗಿಸಲು ಬಳಸುತ್ತಾರೆ. ಇದರಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ ಒಂದರಲ್ಲಿರುವ ಆನೆ ಸಂರಕ್ಷಿಸಬೇಕಾದ ಪ್ರಾಣಿ ಎಂಬುದಕ್ಕೆ ಧಕ್ಕೆಯಾಗುತ್ತದೆ; ಪ್ರಾಣಿಗಳನ್ನು ಸೆರೆಹಿಡಿಯುವುದು, ತರಬೇತಿ ನೀಡುವುದು, ಪಳಗಿಸುವುದು, ನೋಯಿಸುವುದು, ಕೀಟಲೆ ಮಾಡುವುದು ಶಿಕ್ಷಾರ್ಹ ಅಪರಾಧಗಳಾಗಿದ್ದು, ಅಂಥ ಅಪರಾಧಗಳನ್ನು ಮಾಡುವ ಯಾವುದೇ ವ್ಯಕ್ತಿಗೆ 3 ರಿಂದ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸುಧೀಲ್ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ