ಕೊಲ್ಲಂ: ನಡುರಸ್ತೆಯಲ್ಲಿ ಮಹಿಳೆಯರು ಜಗಳ ಆಡುವುದನ್ನು ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆಟೋ ಚಾಲಕನ ಮೇಲೆ ದಾಳಿ ಮಾಡಿದ ಮಹಿಳೆಯೊಬ್ಬರು ಚಾಲಕನ ಕೈ ಮುರಿದಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕೊಲ್ಲಂನ ಕಡಕ್ಕಲ್ ಮೂಲದ ವಿಜಿತ್, ಕೈ ಮುರಿತಕ್ಕೆ ಒಳಗಾದ ವ್ಯಕ್ತಿ.
ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾಂಗಲುಕಾಡು ಮೂಲದ ಅನ್ಸಿಯಾ ಎಂಬುವರು ಕಬ್ಬಿಣದ ಸಲಾಕೆಯಿಂದ ವಿಜಿತ್ ಮೇಲೆ ಹಲ್ಲೆ ಮಾಡಿದ್ದರು. ಆಕೆಯ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾಂಗಲುಕಾಡು ಎಂಬಲ್ಲಿ ಟೈಲರಿಂಗ್ ಘಟಕ ನಡೆಸುತ್ತಿರುವ ಅನ್ಸಿಯಾ ಹಾಗೂ ಇತರ ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಜಗಳವಾಡುತ್ತಿದ್ದರು. ಮಹಿಳೆಯರು ನಿಂದಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದ್ದು, ಕಲ್ಲು ತೂರಾಟವೂ ನಡೆದಿದೆ. ದಾಳಿಯ ವಿಡಿಯೋವನ್ನು ವಿಜಿತ್ ರೆಕಾರ್ಡ್ ಮಾಡಿದ್ದಾನೆ ಎಂದು ಶಂಕಿಸಿದ ಅನ್ಸಿಯಾ, ಆಟೋ ನಿಲ್ದಾಣಕ್ಕೆ ಬಂದು ವಿಡಿಯೋ ರೆಕಾರ್ಡ್ ಬಗ್ಗೆ ಪ್ರಶ್ನಿಸಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿಲ್ಲ ಅಂತ ವಿಜಿತ್ ಹೇಳಿದರೂ ಕೇಳದ ಅನ್ಸಿಯಾ, ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿ, ಅಲ್ಲಿಂದ ಪರಾರಿಯಾಗಿದಳು. ಘಟನಾ ಸ್ಥಳದಲ್ಲಿದ್ದವರು ಕೂಡಲೇ ವಿಜಿತ್ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಅನ್ಸಿಯಾರೊಂದಿಗೆ ಜಗಳವಾಡಿದ ಇಬ್ಬರು ಮಹಿಳೆಯರ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಅನ್ಸಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.