ಉನ್ನಾವೊ : ಹಸನ್‌ಗಂಜ್ ತಹಶೀಲು ವ್ಯಾಪ್ತಿಯ ಇಟ್ಕುಟಿ ಗ್ರಾಮದ ವಿಕ್ರಮ್ ಖೇಡಾ ಪ್ರದೇಶದಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ತೆರವಿಗೆ ಬಂದಿದ್ದ ಕಂದಾಯ ಇಲಾಖೆ ತಂಡದ ಎದುರು ಮಹಿಳೆಯೊಬ್ಬರು ತನ್ನ ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು, ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಜಯ್ ಎಂಬುವವರ ಮೇಲೆ ಒತ್ತುವರಿ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯ ತಂಡ ಗುರುವಾರ ಗ್ರಾಮಕ್ಕೆ ತೆರಳಿ, ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿ ಹಿಂದಿರುಗಿದ್ದರು. ನಂತರ ಮಹಿಳೆ ಗುಡಿಸಲಿಗೆ ಬೆಂಕಿ ಹಚ್ಚಿದ್ದು, ಸ್ಥಳೀಯರು ಅವಘಡ ತಪ್ಪಿಸಿದ್ದಾರೆ. ಇವೆಲ್ಲವೂ ಗ್ರಾಮದ ಮುಖ್ಯಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಸಂಗಂಜ್ ಉಪವಿಭಾಗಾಧಿಕಾರಿ (ಎಸ್‌ಡಿಎಂ) ಅಂಕಿತ್ ಶುಕ್ಲಾ ಮಾತನಾಡಿ, ವಿಕ್ರಮ್ ಖೇಡಾದಲ್ಲಿ ಅಜಯ್ ಅವರು ಸರ್ಕಾರಿ ಭೂಮಿಯಲ್ಲಿ 'ಪಕ್ಕಾ' ನಿರ್ಮಾಣದ ಬಗ್ಗೆ ಈ ಹಿಂದೆಯೂ ಹಲವಾರು ದೂರುಗಳು ಬಂದಿದ್ದವು ಮತ್ತು ಅದನ್ನು ತೆಗೆದುಹಾಕಲು ಅವರನ್ನು ಕೇಳಲಾಯಿತು. ಆಗ ಗುಡಿಸಲು ತೆಗೆದಿದ್ದ ಅಜಯ್, ಸ್ವಲ್ಪ ಸಮಯದ ನಂತರ ಮತ್ತೆ ಅತಿಕ್ರಮಣ ಮಾಡಿ ಗುಡಿಸಲು ಕಟ್ಟಿಕೊಂದಿದ್ದರು ಎಂದಿದ್ದಾರೆ.