ಪಾರಾದೀಪ್ : ಕಾಲುಗಳಿಗೆ ಕ್ಯಾಮೆರಾ ಮತ್ತು ಮೈಕ್ರೊಚಿಪ್ ಸಾಧನಗಳನ್ನು ಜೋಡಿಸಲಾಗಿರುವ ಪಾರಿವಾಳವೊಂದು ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ ಕರಾವಳಿಯಲ್ಲಿ ಮೀನುಗಾರಿಕೆ ದೋಣಿಗೆ ಸಿಕ್ಕಿಬಿದ್ದಿದೆ.
10 ದಿನಗಳ ಹಿಂದೆ ಕೊನಾರ್ಕ್‌ನಿಂದ ಸುಮಾರು 35 ಕಿ.ಮೀ.
ದೂರದ ಕರಾವಳಿಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ದೋಣಿಯಲ್ಲಿ ಈ ಪಾರಿವಾಳ ಸಿಕ್ಕಿಬಿದ್ದಿತ್ತು. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸುತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೋಣಿ ಮೇಲೆ ಕುಳಿತಿದ್ದ ಈ ಪಾರಿವಾಳವನ್ನು ಬೆಹೆರಾ ಎಂಬುವವರು ಸೆರೆ ಹಿಡಿದಿದ್ದರು. ಪಾರಿವಾಳಕ್ಕೆ ಅಕ್ಕಿ ನುಚ್ಚನ್ನು ಆಹಾರವಾಗಿ ನೀಡಿ ಬದುಕಿಸಿದ್ದರು. ದೋಣಿ ದಡಕ್ಕೆ ಬಂದ ನಂತರ ಪಾರಿವಾಳವನ್ನು ಬುಧವಾರ ಕರಾವಳಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
'ಪಾರಿವಾಳದ ಕಾಲುಗಳಲ್ಲಿ ಕ್ಯಾಮೆರಾ ಮತ್ತು ಮೈಕ್ರೋಚಿಪ್ ಜೋಡಿಸಿರುವುದು ಕಂಡುಬಂದಿದೆ. ರೆಕ್ಕೆಗಳ ಮೇಲೆ ಗುರುತಿಸಲಾಗದ ಬರಹವಿದೆ. ಆದರೆ, ಇದು ಒಡಿಯಾ ಭಾಷೆ ಅಲ್ಲವೆಂಬುದು ಖಚಿತಪಟ್ಟಿದೆ. ಈ ಬರಹ ಗುರುತಿಸಲು ತಜ್ಞರ ನೆರವು ಪಡೆಯಲಾಗುವುದು. ಪಾರಿವಾಳವನ್ನು ಪಶುವೈದ್ಯರು ಪರೀಕ್ಷಿಸಲಿದ್ದಾರೆ. ಅದರ ಕಾಲುಗಳಲ್ಲಿರುವ ಸಾಧನಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಆರ್. ರಾಹುಲ್ ತಿಳಿಸಿದರು.