ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ಪ್ರವೇಶ ಪಡೆದಿರುವ ಶೇ.37ರಷ್ಟು ದಲಿತ ಹಾಗೂ ಆದಿವಾಸಿ ವಿದ್ಯಾರ್ಥಿಗಳನ್ನು ಅವರ ಜಾತಿಯನ್ನು ತಿಳಿಯುವ ಉದ್ದೇಶದಿಂದ ಅವರು ಪ್ರವೇಶಾತಿ ಪರೀಕ್ಷೆಯಲ್ಲಿ ಪಡೆದಿರುವ ರ‍್ಯಾಂಕ್ ಗಳ ಬಗ್ಗೆ ಸಹಪಾಠಿಗಳು ವಿಚಾರಿಸಿರುವುದಾಗಿ ಐಐಟಿ ಬಾಂಬೆಯ ಆಂತರಿಕ ಸಮೀಕ್ಷೆಯೊಂದು ತಿಳಿಸಿದೆ.
ಐಐಟಿ ಪ್ರವೇಶಾತಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಮೀಸಲಾದ ಸೀಟುಗಳ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅಂಕ ಕಡಿತ (ಕಟ್ ಆಫ್ ಮಾರ್ಕ್ಸ್) ಕಡಿಮೆ ಮಟ್ಟದಲ್ಲಿರುತ್ತದೆ. ಮೇಲ್ಜಾತಿಯ ವಿದ್ಯಾರ್ಥಿಗಳಿಗಿಂತ ಕಡಿಮೆ ರ‍್ಯಾಂಕ್ ಗಳನ್ನು ಪಡೆದಿದ್ದರೂ, ದಲಿತರು ಹಾಗೂ ಆದಿವಾಸಿ ವಿದ್ಯಾರ್ಥಿಗಳು ಐಐಟಿಯಲ್ಲಿ ಸೀಟು ಪಡೆಯುವುದಕ್ಕೆ ಈ ನಿಯಮವೇ ಕಾರಣವೆಂದು ಜಾತಿ ಆಧಾರಿತ ಮೀಸಲಾತಿ ವಿರೋಧಿಗಳ ವಾದವಾಗಿದೆ.
ಬಾಂಬೆ ಐಐಟಿಯ ದಲಿತ ಹಾಗೂ ಆದಿವಾಸಿ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ನಡೆಸಿದ ಸಮೀಕ್ಷೆಯ ಭಾಗವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ಘಟಕವು ಈ ಮಾಹಿತಿಯನ್ನು ಸಂಗ್ರಹಿಸಿದೆ. ಫೆಬ್ರವರಿ 12ರಂದು ದಲಿತ ವಿದ್ಯಾರ್ಥಿ ಸೋಲಂಕಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಳಿಕ ಸಮೀಕ್ಷೆಯ ವಿವರಗಳು ಬೆಳಕಿಗೆ ಬಂದಿವೆ.
ಐಐಟಿ ಬಾಂಬೆಯ ತಂತ್ರಜ್ಞಾನ (ರಾಸಾಯನಿಕ) ಕೋರ್ಸ್ ನ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಸೋಲಂಕಿ ಕಾಲೇಜ್ ನಲ್ಲಿ ಜಾತಿತಾರತಮ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದುಆತನ ಕುಟುಂಬ ಆರೋಪಿಸಿತ್ತು. ತರುವಾಯ ಈ ವಿಷಯವಾಗಿ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು.
ಮಾರ್ಚ್ 2ರಂದು ತನಿಖಾ ಸಮಿತಿಯು ಸಲ್ಲಿಸಿದ ವರದಿಯು, ಸೋಲಂಕಿಯ ಆತ್ಮಹತ್ಯೆಗೆ ಜಾತಿ ತಾರತಮ್ಯ ಕಾರಣವಾಗಿರುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಶೈಕ್ಷಣಿಕವಾಗಿ ತನ್ನ ಸಾಧನೆಯು ಹದಗೆಟ್ಟಿದ್ದುದು ಆತನ ಆತ್ಮಹತ್ಯೆಗೆ ಕಾರಣವೆಂದು ವರದಿ ಹೇಳಿದೆ.
ಬಾಂಬೆ ಐಐಟಿಯಲ್ಲಿ ಜಾತಿ ತಾರತಮ್ಯ ವ್ಯಾಪಕ
2022ರ ಫೆಬ್ರವರಿಯಲ್ಲಿ ಆಯೋಜಿಸಲಾದ ಸಮೀಕ್ಷೆಯೊಂದು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಬುಡಕಟ್ಟು ಶ್ರೇಣಿಯ ಹಲವಾರು ವಿದ್ಯಾರ್ಥಿಗಳು ಬಾಂಬೆ ಐಐಟಿ ಕ್ಯಾಂಪಸ್ನಲ್ಲಿ ಜಾತಿತಾರತಮ್ಯವನ್ನು ಅನುಭವಿಸಿದ್ದಾರೆಂದು ಹೇಳಿದೆ.
|ನವದೆಹಲಿ:ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಸೇರಿದ ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಎಸ್ಸಿ-ಎಸ್ಟಿ ವಿದ್ಯಾರ್ಥಿ ಘಟಕವು ಪ್ರಶ್ನಾವಳಿಯನ್ನು ಕಳುಹಿಸಿದ್ದು, 388 ಮಂದಿ ಅದಕ್ಕೆ ಉತ್ತರಿಸಿದ್ದರು. ಅವರ ಪೈಕಿ 77 ಮಂದಿ ತಾವು ಬೋಧಕವರ್ಗದಿಂದ ಹಾಗೂ ಸಹಪಾಠಿಗಳಿಂದ ತಾರತಮ್ಯವನ್ನು ಅನುಭವಿಸಿರುವುದಾಗಿ ತಿಳಿಸಿದ್ದರು ಎಂದು ಸುದ್ದಿಜಾಲತಾಣ ' ದಿ ವೈರ್'ನ ವರದಿಯೊಂದು ತಿಳಿಸಿದೆ.
ಮೇಲ್ಜಾತಿಯ ವಿದ್ಯಾರ್ಥಿಗಳು ಜಾತಿವಾದಿ ಅಥವಾ ಮೀಸಲಾತಿ ವಿರೋಧಿ ಜೋಕ್ ಗಳು, ಮಿಮಿಗಳು ಅಥವಾ ಹಾಡುಗಳನ್ನು ಕ್ಯಾಂಪಸ್ ನಲ್ಲಿ ಬಹಿರಂಗವಾಗಿ ಹಂಚಿಕೊಳ್ಳುತ್ತಿದ್ದರು. ಕನಿಷ್ಠ 9 ವಿದ್ಯಾರ್ಥಿಗಳು ಬೋಧಕ ವರ್ಗದ ಸದಸ್ಯರಿಂದ ಜಾತಿವಾದಿ ಮಿಮಿ ಗಳು ಹಾಗೂ ಜೋಕ್ ಗಳನ್ನು ಎದುರಿಸಿದ್ದರು ಎಂದು ವರದಿ ಹೇಳಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.26ರಷ್ಟು ಮಂದಿ ತಮ್ಮ ಜಾತಿಯನ್ನು ತಿಳಿಯುವ ಉದ್ದೇಶದಿಂದ ತಮ್ಮ ಉಪನಾಮವನ್ನು ಸಹಪಾಠಿಗಳು ಕೇಳಿದ್ದರೆಂದು ತಿಳಿಸಿದ್ದಾರೆ.
ಸಮೀಕ್ಷೆಯ ಜೊತೆಗೆ ಎಸ್-ಎಸ್ಟಿ ವಿದ್ಯಾರ್ಥಿ ಘಟಕವು ಜಾತಿ ತಾರತಮ್ಯದ ಅನುಭವಗಳನ್ನು ಹಂಚಿಕೊಳ್ಳಲು ದಲಿತ ಹಾಗೂ ಆದಿವಾಸಿ ವಿದ್ಯಾರ್ಥಿಗಳಿಗೆ ಮುಕ್ತ ಸಂವಾದ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಂಡಿತ್ತು. ತಾವು ಪರಿಶಿಷ್ಟ ಮೀನಾ ಜಾತಿಗೆ ಸೇರಿದವರೆಂಬ ಆರಣಕ್ಕಾಗಿ ಬೋಧಕ ವರ್ಗದ ಸದಸ್ಯರೊಬ್ಬರು ತಮ್ಮ ಉತ್ತರಪತ್ರಿಕೆಯನ್ನು ಪರಿಶೀಲಿಸಲು ನಿರಾಕರಿಸಿದ್ದರೆಂದು ಪರಿಶಿಷ್ಟ ಪಂಗಡದ ವಿದ್ಯಾರ್ಥಿಯೊಬ್ಬ ಸಂವಾದ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದನೆಂದು ' ದಿ ವೈರ್' ವರದಿ ತಿಳಿಸಿದೆ.