ವಾಷಿಂಗ್ಟನ್: ಖಾಲಿಸ್ತಾನ ಪರ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಕಾನ್ಸುಲೇಟ್ ಕಚೇರಿ ಎದುರು ಶುಕ್ರವಾರ ಶಾಂತಿಯುತ ರ‍್ಯಾಲಿ ನಡೆಸಿದ್ದಾರೆ.
ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವರು ತ್ರಿವರ್ಣ ಧ್ವಜಗಳನ್ನು ಹಿಡಿದು, 'ನಾವು ಭಾರತಕ್ಕೆ ಬೆಂಬಲವಾಗಿ ನಿಲ್ಲಲಿದ್ದೇವೆ' ಎಂಬ ಸಂದೇಶ ರವಾನಿಸಿದ್ದಾರೆ.
ಖಾಲಿಸ್ತಾನ ಪರ ಬೆಂಬಲಿಗರ ದುರ್ವರ್ತನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ವಂದೆ ಮಾತರಂ' ಘೋಷಣೆಯನ್ನೂ ಮೊಳಗಿಸಿದ್ದಾರೆ. ರ‍್ಯಾಲಿ ವೇಳೆ ಕೆಲ ಕಿಡಿಗೇಡಿಗಳು ಖಾಲಿಸ್ತಾನ ಪರ ಘೋಷಣೆಗಳನ್ನೂ ಕೂಗಿದ್ದಾರೆ. ಮುಂಜಾಗ್ರತಾ ದೃಷ್ಟಿಯಿಂದ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕೆನಡಾ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚಿವೆ. ಖಾಲಿಸ್ತಾನ ಪರ ಬೆಂಬಲಿಗರು ಈ ದೇಶಗಳಲ್ಲಿನ ಕೆಲ ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದರು.