ನವದೆಹಲಿ: ದೇಶದ ಪ್ರಜಾಪ್ರಭುತ್ವ ಟೀಕಿಸಿರುವುದಕ್ಕಾಗಿ ಕ್ಷಮೆಯಾಚಿಸಬೇಕೆಂಬ ಬಿಜೆಪಿ ಬೇಡಿಕೆಯ ಒತ್ತಡ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಲೋಕಸಭೆಯ ಕಲಾಪಕ್ಕೆ ಹಾಜರಾದರು. ಆದರೆ, ಕಲಾಪ ನಡೆಯದೇ ಅವರಿಗೆ ಮಾತನಾಡುವ ಅವಕಾಶ ಸಿಗಲಿಲ್ಲ.
ರಾಹುಲ್ ಕ್ಷಮೆ ಕೇಳಬೇಕೆಂದು ಬಿಜೆಪಿ ಮುಂದುವರಿಸಿದ ಪ್ರತಿಭಟನೆಗೆ ಪ್ರತಿಯಾಗಿ, ಅದಾನಿ ವಿಷಯ ಜೆಪಿಸಿ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಸಂಸತ್ತಿನ ಸುತ್ತ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಇದರಿಂದ ಸಂಸತ್‌ನ ಉಭಯ ಸದನಗಳಲ್ಲಿ ಸತತ ನಾಲ್ಕನೇ ದಿನವೂ ಕಲಾಪಗಳು ದಿನದ ಮಟ್ಟಿಗೆ ಮುಂದೂಡಲ್ಪಟ್ಟವು.
ಲಂಡನ್‌ನಲ್ಲಿ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿರುವುದಾಗಿ ಟೀಕಿಸಿರುವ ರಾಹುಲ್ ಗಾಂಧಿ ಕ್ಷಮೆಯಾಚಿಸಲೇಬೇಕೆಂದು ಆಡಳಿತರೂಢ ಎನ್‌ಡಿಎ ಸಂಸದರು ಬಿಗಿಪಟ್ಟು ಹಿಡಿದು, ಪ್ರತಿಭಟಿಸಿದರು. ಅದಾನಿ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಸೇರಿ ವಿಪಕ್ಷಗಳು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಒಗ್ಗಟ್ಟಿನ ಸಮರ ಮುಂದುವರಿಸಿದವು.
ಬ್ರಿಟನ್‌ನಿಂದ ಬುಧವಾರ ಮರಳಿದ ರಾಹುಲ್ ಗಾಂಧಿ ಅವರು, ಮಧ್ಯಾಹ್ನ 12.45ರ ವೇಳೆಗೆ ಸಂಸತ್‌ಗೆ ಬಂದರು. ಸದನ ಸೇರಿದ ಕೆಲವೇ ನಿಮಿಷಗಳಲ್ಲಿ ಪ್ರತಿಭಟನೆಯ ಕಾರಣಕ್ಕೆ ಕಲಾಪವನ್ನು ಸ್ಪೀಕರ್ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಮತ್ತೆ ಸದನ ಸೇರಿ ನಿಮಿಷ ಕಳೆಯುವುದರೊಳಗೆ ಅದೇ ಪರಿಸ್ಥಿತಿ ಮರುಕಳುಹಿಸಿತು. ರಾಜ್ಯಸಭೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಎರಡು ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಮುಂದೂಡಲ್ಪಟ್ಟ ಉಭಯ ಸದನಗಳ ಬೆಳಿಗ್ಗೆಯ ಕಲಾಪಗಳಲ್ಲಿ ಆಡಳಿತ ಮತ್ತು ವಿಪಕ್ಷಗಳ ಸಂಸದರ ಘೋಷಣೆ, ಪ್ರತಿಭಟನೆಗಳೇ ಸದ್ದು ಮಾಡಿದವು. ವಿಪಕ್ಷಗಳು ಜೆಪಿಸಿ ತನಿಖೆಗೆ ಒತ್ತಾಯಿಸಿ ಘೋಷಣೆ ಕೂಗಿದರೆ, ತೃಣಮೂಲ ಕಾಂಗ್ರೆಸ್ ಸಂಸದರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿಕೊಂಡು, ಸ್ಪೀಕರ್ ಮತ್ತು ಸಭಾಪತಿಗಳ ಆವರಣಕ್ಕೆ ಧುಮುಕಿ ಪ್ರತಿಭಟಿಸಿದರು.
ಮಧ್ಯಾಹ್ನ ವಿಪಕ್ಷಗಳ ಸಂಸದರು ಸಂಸತ್ತಿನ ಹೊರಗೆ ಒಟ್ಟುಗೂಡಿ, ಸಂಸತ್ ಭವನದ ಸುತ್ತ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ದೇಶದ ಪ್ರಜಾಪ್ರಭುತ್ವ ರಕ್ಷಿಸಬೇಕು ಮತ್ತು ಅದಾನಿ ವಿಷಯವನ್ನು ಜೆಪಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸುವುದು ನಮ್ಮ ಗುರಿ ಎಂದು ವಿಪಕ್ಷಗಳ ನಾಯಕರು ಹೇಳಿದರು. ಮಾನವ ಸರಪಳಿಯಲ್ಲಿ ರಾಹುಲ್ ಗಾಂಧಿ ಇರಲಿಲ್ಲ.
ಟಿಎಂಸಿ ಹೊರತುಪಡಿಸಿ ಉಳಿದ ವಿಪಕ್ಷಗಳ ಬಹುತೇಕ ಸಂಸದರು, ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಮತ್ತು ಗೌತಮ್ ಅದಾನಿ ವಿರುದ್ಧ ಘೋಷಣಾ ಫಲಕಗಳನ್ನು ಹಿಡಿದಿದ್ದರು.
ಸಂಸತ್ತು ಮತ್ತು ಇಡೀ ದೇಶವನ್ನು ಅವಮಾನಿಸಿರುವ ತಮ್ಮ ಹೇಳಿಕೆಗಾಗಿ ರಾಹುಲ್ ಗಾಂಧಿ ಮೊದಲು ವಿಷಾದ ವ್ಯಕ್ತಪಡಿಸಲಿ. ಅವರ ಟೀಕೆಗೆ ಇಡೀ ದೇಶ ಕ್ರೋಧಗೊಂಡಿದೆ ಎಂದು ಕೇಂದ್ರ ಸಚಿವರಾದ ಪೀಯೂಷ್ ಗೋಯೆಲ್ ಮತ್ತು ಪ್ರಲ್ಹಾದ ಜೋಶಿ ಹೇಳಿದರು.
ತೃಣಮೂಲ ಕಾಂಗ್ರೆಸ್, ವಿಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ಅದಾನಿ ಸಮೂಹದ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಪ್ರತ್ಯೇಕವಾಗಿ ಒತ್ತಾಯಿಸಿತು. ಪಕ್ಷದ ನಾಯಕ ಡೆರೆಕ್ ಓಬ್ರಿಯಾನ್ 'ಸರ್ಕಾರವು ಸಂಸತ್ತನ್ನು ಗಾಢಾಂಧಾಕಾರದ ಕೂಪವಾಗಿ ಪರಿವರ್ತಿಸುತ್ತಿದೆ. ಚರ್ಚೆಗಳಿಗೆ ಅವಕಾಶ ನೀಡದೆ, ಸಂಸತ್‌ನ್ನು ಅಪ್ರಸ್ತುತಗೊಳಿಸುತ್ತಿದೆ' ಎಂದು ಆರೋಪಿಸಿದರು.
ಈ ಜಟಾಪಟಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಪ್ರವೇಶಿಸುವಂತೆ ಮನವಿ ಮಾಡಲು ವಿಪಕ್ಷಗಳು ಸಮಯ ನೋಡುತ್ತಿವೆ ಎಂದು ಮೂಲಗಳು ಹೇಳಿವೆ.