ನವದೆಹಲಿ: ಕ್ವಾಡ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯು ಶುಕ್ರವಾರ ಇಲ್ಲಿ ನಿಗದಿಯಾಗಿದೆ.
ಚೀನಾವು ಇಂಡೊ-ಪೆಸಿಫಿಕ್ ವಲಯದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಂಡು ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ವಲಯದ ಒಟ್ಟಾರೆ ಪರಿಸ್ಥಿತಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
'ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸಭೆಯ ನೇತೃತ್ವ ವಹಿಸಲಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್, ಜಪಾನ್‌ನ ವಿದೇಶಾಂಗ ಸಚಿವ ಯೋಶಿಮಸಾ ಹಯಾಶಿ ಹಾಗೂ ಆಸ್ಟ್ರೇಲಿಯಾದ ಪೆನಿ ವೊಂಗ್ ಅವರು ಇದರಲ್ಲಿ ಭಾಗವಹಿಸಲಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ತಿಳಿಸಿದೆ.
'2022ರ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಸಭೆ ನಡೆದಿತ್ತು. ಆಗ ಚರ್ಚಿಸಲಾಗಿದ್ದ ವಿಷಯಗಳ ಜೊತೆಗೆ ಇಂಡೊ-ಪೆಸಿಫಿಕ್ ವಲಯದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೆ ಈ ಸಭೆ ಎಲ್ಲರಿಗೂ ಉತ್ತಮ ಅವಕಾಶ ಎನಿಸಿದೆ. ಕ್ವಾಡ್‌ನ ರಚನಾತ್ಮಕ ಕಾರ್ಯಸೂಚಿಯಲ್ಲಿ ಆಗಿರುವ ಪ್ರಗತಿಯ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ' ಎಂದು ಹೇಳಿದೆ.