ಶಿಮ್ಲಾ: ಮುಸ್ಲಿಂ ಧರ್ಮದ ವಧು-ವರ ವಿಶ್ವ ಹಿಂದೂ ಪರಿಷತ್ ನಡೆಸುವ ಇಲ್ಲಿನ ದೇಗುಲವೊಂದರಲ್ಲಿ ಸೋಮವಾರ ವಿವಾಹವಾಗಿದ್ದಾರೆ. ಈ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯೂ ಆಗಿರುವ ಸತ್ಯನಾರಾಯಣ ದೇಗುಲದಲ್ಲಿ ಅವರು ವಿವಾಹವಾಗಿದ್ದಾರೆ.ಪಕ್ಕದಲ್ಲೇ ಮಸೀದಿ ಇದ್ದರೂ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನಡೆದಿದೆ.
'ಸಿವಿಲ್ ಎಂಜಿನಿಯರ್ ಆಗಿರುವ ವರ ಹಾಗೂ ಎಂ.ಟೆಕ್ ಪದವೀಧರೆ ವಧು ವಿವಾಹಕ್ಕೆ ಹಿಂದೂ ಸಂಘಟನೆಗಳು ಬೆಂಬಲ ನೀಡಿವೆ' ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
'ಆರ್‌ಎಸ್‌ಎಸ್ 'ಮುಸ್ಲಿಂ ವಿರೋಧಿ' ಎಂಬ ಆರೋಪ ಇದೆ. ಈ ಮಧ್ಯೆ ಧಾರ್ಮಿಕ ಸಾಮರಸ್ಯ ಸಾರುವ ಸಂಕೇತವಾಗಿ ಈ ವಿವಾಹ ನಡೆದಿದೆ. ಇದು ಅತ್ಯಂತ ಅಪರೂಪದ ನಡೆಯಾಗಿದ್ದು, ಎಲ್ಲೆಡೆ ಹರಡಬೇಕು' ಎಂದು ದೇಗುಲ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ ತಿಳಿಸಿದ್ದಾರೆ.
ಎಲ್ಲಾ ಧರ್ಮದವರೂ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ವಧುವಿನ ತಂದೆ ತಿಳಿಸಿದ್ದಾರೆ.