ಕೊಕ್ರಜಾರ್ : ಸೋಶಿಯಲ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಗಿಳಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿದ ನಂತರ ಆತನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಾಣಿಗಳ ನೈತಿಕ ಚಿಕಿತ್ಸೆಗಾಗಿ ಜನರು (ಪೆಟಾ) ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಜಹಿದುಲ್ ಇಸ್ಲಾಂನನ್ನು ಬಂಧಿಸಲಾಗಿದೆ ಎಂದು ಕಚುಗಾಂವ್‌ನ ವಿಭಾಗೀಯ ಅರಣ್ಯಾಧಿಕಾರಿ ಭಾನು ಸಿನ್ಹಾ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಹಿದುಲ್ ಇಸ್ಲಾಂನಿಂದ ಎರಡು ಗಿಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇರೆ ಯಾವುದೇ ವ್ಯಕ್ತಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯ ನಂತರ ತಿಳಿಯುತ್ತದೆ ಎಂದು ಸಿನ್ಹಾ ಹೇಳಿದರು.