ಜಿನೆವಾ: ಕೋವಿಡ್ ನ ಮೂಲವನ್ನು ಕಂಡುಹಿಡಿಯುವುದು ನೈತಿಕ ಕಡ್ಡಾಯವಾಗಿದೆ ಮತ್ತು ಎಲ್ಲಾ ಅನುಮಾನ, ಊಹೆಗಳನ್ನು ಪರಿಶೀಲನೆ ನಡೆಸಬೇಕಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ.
ಕೋವಿಡ್ ಸೋಂಕು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಪತ್ತೆಹಚ್ಚಲು ವಿಶ್ವಸಂಸ್ಥೆ ಬದ್ಧವಾಗಿದೆ ಎಂದು ವಿಶ್ವಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಟ್ವೀಟ್ ಮಾಡಿದ್ದಾರೆ.
ಚೀನಾದ ಪ್ರಯೋಗಾಲಯದಲ್ಲಿ ಆದ ಸೋರಿಕೆಯು ಕೋವಿಡ್ ಸೋಂಕು ಹರಡಲು ಕಾರಣವಾಗಿದೆ ಎಂದು ಈ ಹಿಂದೆ ಅಮೆರಿಕದ ಏಜೆನ್ಸಿಯೊಂದು ಪ್ರತಿಪಾದಿಸಿದೆ.
ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ- ಭವಿಷ್ಯದಲ್ಲಿ ಮತ್ತೆ ಸಾಂಕ್ರಾಮಿಕ ಉಲ್ಬಣಿಸದಂತೆ ಕ್ರಮ ಕೈಗೊಳ್ಳಲು, ನೈತಿಕ ದೃಷ್ಟಿಯಿಂದ ನೋಡಿದರೆ -ಕೋವಿಡ್ನಿಂದ ಮೃತಪಟ್ಟ ಹಾಗೂ ಕೋವಿಡ್ ಜತೆ ಬದುಕುತ್ತಿರುವ ಲಕ್ಷಾಂತರ ಜನರ ಸಲುವಾಗಿ, ಸೋಂಕಿನ ಮೂಲವನ್ನು ಕಂಡುಹಿಡಿಯುವುದು ಅತ್ಯಗತ್ಯವಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.
ಈ ವಾರಾಂತ್ಯದಲ್ಲಿ ವಿಶ್ವ ಆರೋಗ್ಯಸಂಸ್ಥೆಗೆ ಬಹಿರಂಗಪತ್ರ ಬರೆದಿರುವ ಕಾರ್ಯಕರ್ತರು, ರಾಜಕಾರಣಿಗಳು ಮತ್ತು ಶಿಕ್ಷಣ ತಜ್ಞರು 'ಕೋವಿಡ್ ಸೋಂಕಿನ ವಾರ್ಷಿಕ ಸಂದರ್ಭದಲ್ಲಿ ಕೋವಿಡ್ ಲಸಿಕೆಯ ಅಸಮಾನ ಹಂಚಿಕೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕೋವಿಡ್ ಲಸಿಕೆಯ ಅಸಮಾನ ಹಂಚಿಕೆಯು ಕನಿಷ್ಟ 1.3 ದಶಲಕ್ಷ ತಡೆಗಟ್ಟಬಹುದಾದ ಸಾವಿಗೆ ಕಾರಣವಾಗಿದೆ' ಎಂದು ಆಗ್ರಹಿಸಿದ್ದಾರೆ. 2021ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಂಡವು ಚೀನಾದ ವುಹಾನ್(ಇಲ್ಲಿ ಮನುಷ್ಯರಲ್ಲಿ ಕೊರೋನ ಸೋಂಕಿನ ಪ್ರಥಮ ಪ್ರಕರಣ ಪತ್ತೆಯಾಗಿತ್ತು) ಬಳಿ ಒಂದು ವಾರ ಪರಿಶೀಲನೆ ನಡೆಸಿದ ಬಳಿಕ ನೀಡಿದ ವರದಿಯಲ್ಲಿ 'ಕೊರೋನಾ ವೈರಸ್ ಬಾವಲಿಯ ಮೂಲಕ ಮನುಷ್ಯರಿಗೆ ಪ್ರಸಾರವಾಗಿರುವ ಸಾಧ್ಯತೆಯಿದೆ, ಆದರೆ ಈ ವಿಷಯದಲ್ಲಿ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ' ಎಂದು ಉಲ್ಲೇಖಿಸಿದೆ.