ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತದ ಬಹುತೇಕ ಪ್ರದೇಶಗಳಲ್ಲಿ ದಟ್ಟ ಚಳಿಯ ಅನುಭವ ಕಂಡುಬರಲಿಲ್ಲ. ಏಕೆಂದರೆ, 1901ರಿಂದ ಇದುವರೆಗಿನ ಈ ತಿಂಗಳಲ್ಲಿನ ಅತ್ಯಂತ ಬೆಚ್ಚಗಿನ ಹವಾಮಾನವು ಈ ವರ್ಷ ದಾಖಲಾಯಿತು. ಅಂದರೆ, ಈ ಹಿಂದಿನ ಫೆಬ್ರವರಿ ತಿಂಗಳುಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ತಾಪಮಾನ ದಾಖಲಾಯಿತು.
ಫೆಬ್ರವರಿಯಲ್ಲಿ ಸರಾಸರಿ ಗರಿಷ್ಠ ತಾಪಮಾನ 29.5 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಬೇಸಿಗೆ ಕೂಡ ಅಧಿಕ ತಾಪಮಾನದಿಂದ ಕೂಡಿರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ. ಮಾರ್ಚ್ ಮತ್ತು ಮೇ ನಡುವಿನ ಅವಧಿಯಲ್ಲಿ ಬಿಸಿಗಾಳಿ ಹೆಚ್ಚಾಗಿ ಬೀಸುವ ಸಂಭವನೀಯತೆ ಇದೆ ಎಂದೂ ಐಎಂಡಿ ಹೇಳಿದೆ.
ಬೇಸಿಗೆ ವಾತಾವರಣದ ಪರಿಸ್ಥಿತಿ ಹಾಗೂ ಸಿದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಫೆ. 6ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಜರುಗಿತು. ಬೇಸಿಗೆ ಕಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ನಾಗರಿಕರು, ವೈದ್ಯಕೀಯ ವೃತ್ತಿಪರರು, ಸ್ಥಳೀಯ ಸಂಸ್ಥೆ ಅಧಿಕಾರಿಗಳು, ವಿಪತ್ತು ಪ್ರತಿಕ್ರಿಯೆ ತಂಡಗಳು ಮತ್ತು ವಿವಿಧ ಕ್ಷೇತ್ರಗಳ ಜನರಿಗೆ ಪ್ರತ್ಯೇಕವಾಗಿ ಅನ್ವಯಿಸುವಂತಹ ಜಾಗೃತಿ ಸಂದೇಶವನ್ನು ಅವರು ರವಾನಿಸಿದರು.
ಯಾವ ಭಾಗಗಳಲ್ಲಿ ಬಿಸಿಗಾಳಿ?: ಮಾರ್ಚ್ನಿಂದ ಮೇ ತಿಂಗಳವರೆಗೆ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಿನ ಉಷ್ಣತೆಯು ಈಶಾನ್ಯ, ಪೂರ್ವ, ಮಧ್ಯ ಮತ್ತು ವಾಯವ್ಯ ಭಾರತದ ಕೆಲವು ಭಾಗಗಳಲ್ಲಿ ಇರುತ್ತದೆ ಎಂದು ಐಎಂಡಿ ತಿಳಿಸಿದೆ. ಮಧ್ಯ ಮತ್ತು ವಾಯವ್ಯ ಭಾರತದ ಹಲವು ಪ್ರದೇಶಗಳಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶಾಖದ ಅಲೆಗಳು ಬೀಸುವ ಸಂಭವನೀಯತೆ ಹೆಚ್ಚಿದೆ. ಪ್ರಸ್ತುತ ಬೇಸಿಗೆ ಕಾಲದಲ್ಲಿ ದಕ್ಷಿಣ ಪರ್ಯಾಯ ದ್ವೀಪವನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ. ಮಾರ್ಚ್ ತಿಂಗಳಲ್ಲಿ ಮಧ್ಯ ಭಾರತದ ಮೇಲೆ ಶಾಖದ ಅಲೆಗಳು ಬೀಸುವ ಸಂಭವನೀಯತೆ ಕಡಿಮೆ ಎಂದೂ ಐಎಂಡಿ ಹೇಳಿದೆ. ಹವಾಮಾನ ಬದಲಾವಣೆ ಕುರಿತ ಅಂತರಸರ್ಕಾರಿ ಸಮಿತಿ 2022ರಲ್ಲಿ ವರದಿಯೊಂದನ್ನು ನೀಡಿದ್ದು, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಶಾಖದ ಅಲೆಗಳು ಮೇಲಿಂದ ಮೇಲೆ ಬೀಸಲಿವೆ. ಅಲ್ಲದೆ, ಹೆಚ್ಚು ಬಿಸಿಯಿಂದ ಕೂಡಿರುತ್ತವೆ ಎಂದು ಎಚ್ಚರಿಕೆ ನೀಡಿದೆ.
ಇರಲಿ ಎಚ್ಚರ: ಪ್ರತಿ ವರ್ಷ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಿರು ಬಿಸಿಲಿಗೆ ಅನೇಕ ಸಾವುಗಳು ಸಂಭವಿಸುತ್ತವೆ. ಹಲವು ವರ್ಷಗಳಿಂದ ಉತ್ತರ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚು ತಾಪಮಾನ ಉಂಟಾಗುತ್ತಿದೆ. ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ ಮತ್ತು ಅರೆಶುಷ್ಕ ಸ್ಥಿತಿಯಲ್ಲಿ ಇರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬಿಸಿಲು ದಾಖಲಾಗುತ್ತಿದೆ. ಹಾಗಾಗಿ, ಇಲ್ಲಿನ ಬಿಸಿಲು ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ವಿದ್ಯುತ್ಗೆ ಭಾರಿ ಬೇಡಿಕೆ: ಕಳೆದ ವರ್ಷದ ದಾಖಲೆಯ ತಾಪಮಾನದ ಪರಿಣಾಮವಾಗಿ ವಿದ್ಯುತ್ ಬಿಕ್ಕಟ್ಟು ಅಧಿಕವಾಗಿತ್ತು. ಈ ವರ್ಷವೂ ಅದು ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರವು ಏಪ್ರಿಲ್ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ (229 ಗಿಗಾವಾಟ್) ಇರಬಹುದೆಂದು ಅಂದಾಜಿಸಿದೆ. ಈ ಬೇಡಿಕೆಯು ಏಪ್ರಿಲ್ನಲ್ಲಿ 1,42,097 ಮಿಲಿಯನ್ ಯುನಿಟ್ ಹಾಗೂ ಮೇ ತಿಂಗಳಲ್ಲಿ 1,41,464 ಮಿಲಿಯನ್ ಯುನಿಟ್ಗಿಂತ ಹೆಚ್ಚಾಗಿರುತ್ತದೆ ಎಂದು ಪ್ರಾಧಿಕಾರ ಅಂದಾಜಿಸಿದೆ. ಬರುವ ಏಪ್ರಿಲ್ ತಿಂಗಳಲ್ಲಿ ರಾತ್ರಿ ವೇಳೆಯ ಗರಿಷ್ಠ ಬೇಡಿಕೆ 217 ಗಿಗಾವಾಟ್ ತಲುಪಬಹುದು ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷ ಏಪ್ರಿಲ್ನಲ್ಲಿ ದಾಖಲಾದ ರಾತ್ರಿಯ ಅತ್ಯಧಿಕ ಬೇಡಿಕೆ ಮಟ್ಟಕ್ಕಿಂತ 6.4 ಪ್ರತಿಶತ ಹೆಚ್ಚಾಗಿದೆ. ಪರಿಸ್ಥಿತಿ ಸ್ವಲ್ಪ ಒತ್ತಡದಿಂದ ಕೂಡಿದೆ ಎಂದು ಫೆ. 3ರಂದು ನೀಡಿರುವ ಟಿಪ್ಪಣಿಯಲ್ಲಿ ಭಾರತೀಯ ಗ್ರಿಡ್ ಕಂಟ್ರೋಲರ್ ತಿವಾರಿ ತಿಳಿಸಿದ್ದಾರೆ. ತಾಪಮಾನವು ಹೆಚ್ಚಾಗಬಹುದಾಗಿರುವುದರಿಂದ ಆರ್ಥಿಕತೆಯ ಎಲ್ಲಾ ವಲಯಗಳು ವಿದ್ಯುತ್ ಬೇಡಿಕೆ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ ಎಂದೂ ಅವರು ಹೇಳಿದ್ದಾರೆ.
ಆರ್ಥಿಕ ಹಾನಿ: ಅಧಿಕ ತಾಪಮಾನವು ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ತೋರುವುದಲ್ಲದೆ, ಆರ್ಥಿಕತೆಯ ವಿವಿಧ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರುತ್ತದೆ. ಶಾಖದ ಅಲೆಗಳು ಈ ಹಿಂದೆ ಬೆಳೆಗಳನ್ನು ಹಾನಿಗೊಳಿಸಿವೆ. ಕೃಷಿ ಇಳುವರಿಯನ್ನು ಕಡಿಮೆ ಮಾಡಿವೆ. ಕಳೆದ ಎರಡು ವರ್ಷಗಳಲ್ಲಿ ಉತ್ತರ ಭಾರತದಲ್ಲಿನ ಆರಂಭಿಕ ಶಾಖದ ಅಲೆಯು ಗೋಧಿ ಬೆಳೆ ಉತ್ಪಾದನೆಯನ್ನು ಗಮನಾರ್ಹ ಮಟ್ಟಕ್ಕೆ ಕಡಿಮೆ ಮಾಡಿತು. ಇದು ಆಹಾರದ ಕೊರತೆ ಮತ್ತು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ದೇಶದ ಆರ್ಥಿಕತೆ ಮತ್ತು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಣತರು ಹೇಳುತ್ತಾರೆ. ಕಡಿಮೆಯಾದ ಕೃಷಿ ಇಳುವರಿ ಮತ್ತು ಆಹಾರದ ಕೊರತೆಯು ಬೆಲೆ ಹೆಚ್ಚಳಕ್ಕೆ ಆಸ್ಪದ ನೀಡುತ್ತದೆ. ಇದು ಸರಕು ಮತ್ತು ಸೇವೆಗಳನ್ನು ಖರೀದಿಸುವ ಗ್ರಾಹಕರ ಸಾಮರ್ಥ್ಯ ಕುಸಿತಕ್ಕೂ ಕಾರಣವಾಗಬಹುದಾಗಿದೆ.
ನೀರಿನ ಕೊರತೆ ಉಲ್ಬಣ: ಶಾಖದ ಅಲೆಗಳು ಹೆಚ್ಚಾದರೆ ಭೂಮಿಯ ಮೇಲಿನ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗುತ್ತದೆ. ಇದರಿಂದಾಗಿ ಸರೋವರಗಳು ಮತ್ತು ನದಿಗಳಲ್ಲಿ ಸಂಗ್ರಹವಾಗಿರುವ ನೀರು ಕಡಿಮೆಯಾಗುತ್ತದೆ. ಈಗಾಗಲೇ ಭಾರತ ಎದುರಿಸುತ್ತಿರುವ ನೀರಿನ ಕೊರತೆಯ ಸಮಸ್ಯೆಯನ್ನು ಇದು ಉಲ್ಬಣಗೊಳಿಸುತ್ತದೆ.
ಬೇಸಿಗೆ ಕಾಲ ವಿಸ್ತರಣೆ ಆರೋಗ್ಯಕ್ಕೆ ಮಾರಕ: ಇತ್ತೀಚಿನ ವರ್ಷಗಳನ್ನು ಗಮನಿಸಿದರೆ ಪ್ರತಿ ವರ್ಷವೂ ಬೇಸಿಗೆಯ ಅವಧಿ ದೀರ್ಘವಾಗುತ್ತ ಸಾಗಿದೆ. ಮಾರ್ಚ್ ತಿಂಗಳ ಅವಧಿಯಲ್ಲಿ 100 ವರ್ಷಗಳಲ್ಲಿಯೇ ಅತಿಹೆಚ್ಚು ತಾಪಮಾನ ಕಳೆದ ವರ್ಷದ ಮಾರ್ಚ್ನಲ್ಲಿ ದಾಖಲಾಗಿದೆ. ಈ ವರ್ಷದ ಫೆಬ್ರವರಿ ಕೂಡ ಹೆಚ್ಚು ಬೆಚ್ಚಗಿತ್ತು. ಬೇಸಿಗೆಯ ಅವಧಿ ಹೆಚ್ಚುತ್ತಿರುವುದರಿಂದ ಜನರು ಅಧಿಕ ಶಾಖಕ್ಕೆ ಒಡ್ಡಿಕೊಳ್ಳುವಂತಾಗಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ರಾಜ್ಯದಲ್ಲಿ ಬಿಸಿಲು ಧಗೆ ಹೆಚ್ಚಳ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹಾಗೂ ಧಗೆ ಏರುತ್ತಿದೆ. ಮಳೆ ಮನ್ಸೂಚನೆ ಇಲ್ಲದಿರುವುದು ಹಾಗೂ ವಾತಾವರಣದಲ್ಲಿ ತೇವಾಂಶ ಕಡಿಮೆ ಹಿನ್ನೆಲೆಯಲ್ಲಿ ಬಿಸಿಲಿನ ಝುಳದ ಜತೆಗೆ ಸೆಖೆಯ ಅನುಭವವಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35-37 ಡಿಗ್ರಿ ಸೆಲ್ಸಿಯಸ್ ಇದ್ದರೆ, ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ 30-34 ಡಿಗ್ರಿ ಸೆ. ಹಾಗೂ ಗೋಕರ್ಣದಲ್ಲಿ 37.6 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಗಿಂತ ಕಾರವಾರ, ಗೋಕರ್ಣ ಮತ್ತು ಮಂಗಳೂರಿನಲ್ಲಿ ಹೆಚ್ಚು ತಾಪಮಾನ ಕಂಡುಬಂದಿದೆ. ಮಾರ್ಚ್ ತಿಂಗಳಿಂದ ಮೇ ಅವಧಿಯೊಳಗೆ ಹೀಟ್ವೇವ್ (ಶಾಖದ ಅಲೆ) ಆತಂಕ ಶುರುವಾಗಲಿದೆ. ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದು ಹಾಗೂ ವಾತಾವರಣದಲ್ಲಿ ತೇವಾಂಶ ಇಲ್ಲದಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಧಾನವಾಗಿ ಉಷ್ಣಾಂಶ ಏರಿಕೆಯಾಗುತ್ತಿದೆ. ತಾಪಮಾನ ಹೆಚ್ಚಾದಂತೆ ಜನರಿಗೆ ಊತ, ತಲೆನೋವು, ವಾಕರಿಕೆ, ನಿರ್ಜಲೀಕರಣ, ಸುಸ್ತು, ವಾಂತಿ ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಪ್ರತಿ ವರ್ಷ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಧಾರವಾಡ, ಕೊಪ್ಪಳ, ಗದಗ, ಬಳ್ಳಾರಿ, ಹಾವೇರಿಯಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ದಾಖಲಾಗುವ ಸಾಧ್ಯತೆ ಇದ್ದು, ಶಾಖದ ಅಲೆಗಳು ಬೀಸಬಹುದಾಗಿದೆ.