ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಭಾನುವಾರ ಖಂಡಿಸಿದೆ ಮತ್ತು ಇದು ರಾಜಕೀಯ ಸೇಡು ಮತ್ತು ಕಿರುಕುಳದ ಕೆಟ್ಟ ಪ್ರಕರಣ ಎಂದು ಕರೆದಿದೆ. ರಾಜಕೀಯ ವಿರೋಧಿಗಳ ವಿರುದ್ಧ ಇಂತಹ ಪ್ರಕರಣಗಳನ್ನು ದಾಖಲಿಸುವ ಮೂಲಕ ಕೇಂದ್ರ ಸರ್ಕಾರ ತಪ್ಪು ನಿದರ್ಶನವನ್ನು ಸ್ಥಾಪಿಸುತ್ತಿದೆ ಎಂದು ಪ್ರತಿಪಾದಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡರಾದ ಅಶೋಕ್ ಗೆಹ್ಲೋಟ್, ಜೈರಾಮ್ ರಮೇಶ್ ಮತ್ತು ಅಭಿಷೇಕ್ ಸಿಂಘ್ವಿ, ಪೊಲೀಸರ ಕ್ರಮ ಕಾಂಗ್ರೆಸ್ ಮಾಜಿ ಮುಖ್ಯಸ್ಥರ ವಿರುದ್ಧದ ವಾತಾವರಣ ಸೃಷ್ಟಿಸುವ ಸೇಡು, ಬೆದರಿಕೆ ಮತ್ತು ಕಿರುಕುಳದ ಸ್ಪಷ್ಟ ಪ್ರಕರಣವಾಗಿದೆ ಎಂದು ಹೇಳಿದರು.
ರಾಜಕೀಯ ಪ್ರಚಾರದ ವೇಳೆ ನೀಡಿದ ವಿರೋಧ ಪಕ್ಷದ ನಾಯಕರ ಹೇಳಿಕೆಗಳ ಮೇಲೆ ಕೇಸುಗಳನ್ನು ದಾಖಲಿಸುವ ಮೂಲಕ ಕೆಟ್ಟ ಉದಾಹರಣೆಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಗೆಹ್ಲೋಟ್ ಪ್ರತಿಪಾದಿಸಿದರು. ಬಿಜೆಪಿ ನಾಯಕರು ತಮ್ಮ ಆಡಳಿತ ಇಲ್ಲದ ರಾಜ್ಯಗಳಲ್ಲಿ ಮಾಡಿದ ಹೇಳಿಕೆಗಳ ಬಗ್ಗೆ ಇದೇ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಚುನಾವಣೆಯ ಸಂದರ್ಭದಲ್ಲಿ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರ ಸಚಿವರು ಇದೇ ರೀತಿಯ ಹೇಳಿಕೆ ನೀಡಿದರೆ, ಅವರು ದೆಹಲಿ ಪೊಲೀಸರು ಮಾಡಿದ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಭಾರತ್ ಜೋಡೋ ಯಾತ್ರೆ ವೇಳೆ ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಭಾರತ್ ಜೋಡೋ ಯಾತ್ರೆ ವೇಳೆ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದ ಲೈಂಗಿಕ ಕಿರುಕುಳ ಸಂತ್ರಸ್ತರ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ನೀಡಿದ ನೋಟಿಸ್‌ಗೆ ಸಂಬಂಧಿಸಿದಂತೆ ವಿಶೇಷ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಭಾನುವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಭಾನುವಾರ ಮುಂಜಾನೆ ರಾಹುಲ್ ಗಾಂಧಿ ನಿವಾಸಕ್ಕೆ ಆಗಮಿಸಿದ ಹೂಡಾ ಭಾರತ್ ಜೋಡೋ ಯಾತ್ರೆಯ ವೇಳೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಲೈಂಗಿಕ ಕಿರುಕುಳ ಸಂತ್ರಸ್ತರ ಬಗ್ಗೆ ವಿವರ ಕೇಳಿದರು.
ರಾಹುಲ್ ಗಾಂಧಿಯವರೊಂದಿಗೆ ಮಾತನಾಡಿದ್ದೇವೆ. ಸ್ವಲ್ಪ ಸಮಯ ಬೇಕು ಎಂದಿದ್ದಾರೆ. ನಾವು ನೀಡಲಾದ ನೋಟಿಸ್ ನ್ನು ಅವರ ಕಚೇರಿಯಿಂದ ಇಂದು ಸ್ವೀಕರಿಸಲಾಗಿದೆ. ವಿಚಾರಣೆಯ ಅಗತ್ಯವಾದರೆ ನಂತರ ಮಾಡುತ್ತೇವೆ ಎಂದು ಹೂಡಾ ಹೇಳಿದರು.
ಅದಾನಿ ಕುರಿತ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಎಷ್ಟು ರೊಚ್ಚಿಗೆದ್ದಿದ್ದಾರೆ ಎಂಬುದನ್ನು ದೆಹಲಿ ಪೊಲೀಸರ ಕೀಳುಮಟ್ಟದ ನಡವಳಿಕೆ ತೋರಿಸುತ್ತವೆ. ಈ ಕಿರುಕುಳವು ನಮ್ಮ ನಂಬಿಕೆಯನ್ನು ಆಳಗೊಳಿಸುತ್ತದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಅದಾನಿ ವಿವಾದ ಕುರಿತು ಪ್ರಶ್ನಿಸುವುದನ್ನು ಕಾಂಗ್ರೆಸ್ ನಿಲ್ಲಿಸುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.