ನವದೆಹಲಿ: ಗರ್ಭದಲ್ಲಿರುವ ಮಕ್ಕಳಿಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸುವ ಉದ್ದೇಶದಿಂದ ಗರ್ಭಿಣಿಯರಿಗೆ 'ಗರ್ಭ ಸಂಸ್ಕಾರ' ಎಂಬ ಅಭಿಯಾನವನ್ನು ಪ್ರಾರಂಭಿಸಿದೆ ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಸಂವರ್ಧಿನಿ ನ್ಯಾಸ್ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮರಾಠೆ ಹೇಳಿದ್ದಾರೆ.
ಗರ್ಭದಲ್ಲಿರುವ ಶಿಶುಗಳಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ನೀಡಲು ಸ್ತ್ರೀರೋಗತಜ್ಞರು, ಆಯುರ್ವೇದ ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಈ ಅಭಿಯಾನ ಕೈಗೊಂಡಿದೆ. ಈ ಮೂಲಕ ಗರ್ಭಿಣಿಯರು ಗೀತಾ ಪಠಣ, ರಾಮಾಯಣ ಮತ್ತು ಯೋಗಾಭ್ಯಾಸ ಮಾಡಲು ಉತ್ತೇಜಿಸಲಾಗುತ್ತದೆ.
'ಗರ್ಭ ಸಂಸ್ಕಾರ' ಅಭಿಯಾನವು ಗರ್ಭಾವಸ್ಥೆಯಿಂದ ಮಗುವಿಗೆ ಪೂರ್ಣಗೊಳ್ಳುವ ತನಕ ಇರಲಿದೆ. ಭಗವದ್ಗೀತಾ ಶ್ಲೋಕಗಳ ಪಠಣ, ರಾಮಾಯಣ ಪಠಣಗಳಿಗೆ ಒತ್ತು ನೀಡಲಾಗುವುದು. ಇದರಿಂದ ಮಗುವಿಗೆ ಕನಿಷ್ಠ 500 ಪದಗಳನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಧುರಿ ಮರಾಠೆ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಮಹಿಳಾ ಅಂಗಸಂಸ್ಥೆಯಾದ ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್, ಈ ಅಭಿಯಾನದ ಮೂಲಕ ಕನಿಷ್ಠ 1,000 ಗರ್ಭಿಣಿಯರನ್ನು ತಲುಪುವ ಉದ್ಧೇಶ ಹೊಂದಿದೆ. ಈ ಅಭಿಯಾನದ ಭಾಗವಾಗಿ ನಿನ್ನೆ (ಮಾ.5) ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯಾಗಾರವನ್ನು ನಡೆಸಿದೆ. ಈ ಕಾರ್ಯಾಗಾರದಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆ ಸೇರಿದಂತೆ ಹಲವಾರು ಸ್ತ್ರೀರೋಗ ತಜ್ಞರು ಭಾಗವಹಿಸಿದ್ದರು ಎಂದು ವರದಿಯಾಗಿದೆ.