ನವದೆಹಲಿ: ಭಾರತದ ಪ್ರಾಗ್ಜೀವಶಾಸ್ತ್ರಜ್ಞರು 20 ಕೋಟಿ ವರ್ಷಗಳ ಹಿಂದೆ ಕಣ್ಮರೆಯಾಗಿದ್ದ 'ಪೈಥೋಸಾರಸ್'ನ (ಮೊಸಳೆಯ ಪ್ರಾಚೀನ ಪ್ರಭೇದ) ಬೃಹದಾಕಾರದ ಪಳೆಯುಳಿಕೆಯನ್ನು ಮಧ್ಯಪ್ರದೇಶದ 'ಟಿಕಿ ಫಾರ್ಮೇಷನ್'ನಲ್ಲಿ ಪತ್ತೆಹಚ್ಚಿದ್ದಾರೆ.
'ಪೈಥೋಸಾರಸ್ ಮತ್ತು ಮೊಸಳೆಗಳು ಏಕ ಪ್ರಭೇದಕ್ಕೆ ಸೇರಿದ್ದು, ಇವುಗಳ ಪೂರ್ವಿಕ ಪ್ರಾಣಿಯೂ ಒಂದೇ ಆಗಿದೆ. ಪೈಥೋಸಾರಸ್ ಈ ಕುಟುಂಬದ ಅತ್ಯಂತ ಪ್ರಾಚೀನ ಜೀವಿಯಾಗಿದೆ. ನಾವು ಪತ್ತೆಹಚ್ಚಿರುವ ಪಳೆಯುಳಿಕೆಯು 8.4 ಮೀಟರ್‌ನಷ್ಟು ಉದ್ದವಿದೆ. ಇದು ಜಗತ್ತಿನ ಅತಿ ಉದ್ದದ ಪಳೆಯುಳಿಕೆಗಳಲ್ಲಿ ಒಂದಾಗಿದೆ' ಎಂದು ಪಳೆಯುಳಿಕೆ ತಜ್ಞ ದೇವಜಿತ್ ದತ್ತ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ದತ್ತ ಹಾಗೂ ಅವರ ತಂಡದ ಮೇಲ್ವಿಚಾರಕ, ಐಐಟಿ ಖರಗಪುರದಲ್ಲಿ ಕೆಲಸ ಮಾಡುತ್ತಿರುವ ಸಂಗಮಿತ್ರ ರೇ ಅವರು ರೇವಾ ದಂಡೆ ಪ್ರದೇಶದಲ್ಲಿ ಈವರೆಗೂ 1 ಸಾವಿರಕ್ಕೂ ಅಧಿಕ ಪಳೆಯುಳಿಕೆಗಳ ಮೂಳೆಗಳನ್ನು ಸಂಗ್ರಹಿಸಿದ್ದಾರೆ.
ಮೊಸಳೆಯ ಜಾತಿಗೆ ಸೇರಿದ ಬಹುತೇಕ ಜೀವಿಗಳು ಮೊಸಳೆಗಳ ಹಾಗೆ ಕಾಣುವುದಿಲ್ಲ. ಆದರೆ ಪೈಥೋಸಾರಸ್‌ಗಳು ಮೊಸಳೆಗಳನ್ನೇ ಹೋಲುತ್ತವೆ. ಚಿಕ್ಕ ಕಾಲುಗಳು, ಅಗಲ ಹಾಗೂ ಭಾರವಾದ ದೇಹ, ಉದ್ದನೆಯ ಬಾಲ, ಉದ್ದವಾದ ಮೂತಿ ಹಾಗೂ ಹರಿತವಾದ ಹಲ್ಲುಗಳನ್ನು ಇವು ಹೊಂದಿರುತ್ತವೆ. ಇವು ಮೀನು ಹಾಗೂ ಇತರೆ ಪ್ರಾಣಿಗಳನ್ನು ತಿನ್ನುತ್ತವೆ.