ಪೆರಿಂಥಲಮನ್ನ: ಅಪಘಾತದಲ್ಲಿ ಮಲ್ಲಪುರಂ ಜಿಲ್ಲೆಯ ಪೆರಿಂಥಲಮನ್ನದ ಎಂಇಎಸ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಮೃತಪಟ್ಟ ಪ್ರರಕಣಕ್ಕೆ ಸಂಬಂಧಿಸಿದಂತೆ ಆಕೆಯ ಸಹಪಾಠಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಅಶ್ವಿನ್ ಎಂದು ಗುರುತಿಸಲಾಗಿದೆ. ಈತ ತ್ರಿಸ್ಸೂರ್ ಮೂಲದ ನಿವಾಸಿ. ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ಚಾಲನೆ ಆರೋಪದ ಮೇಲೆ ಬಂಧಿಸಲಾಗಿದೆ. ಬೈಕ್ನಲ್ಲಿ ಹುಡುಗಿಯರನ್ನು ಕೂರಿಸಿಕೊಂಡು ಬೇಕಾಬಿಟ್ಟಿ ಬೈಕ್ ಚಾಲಯಿಸುವವರಿಗೆ ಈ ಪ್ರಕರಣ ಒಂದು ಪಾಠವಾಗಿದೆ. ಅಪಘಾತದಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಅಲ್ಫೋನ್ಸಾ (22) ಎಂದು ಗುರುತಿಸಲಾಗಿದೆ. ಈಕೆ ಆಲಪ್ಪುಳದ ನಿವಾಸಿ.
ಅಲ್ಫೋನ್ಸಾ ಮತ್ತು ಅಶ್ವಿನ್ ಸೋಮವಾರ ಬೆಳಗ್ಗೆ 6.50ರ ಸುಮಾರಿಗೆ ಥಿರುಕಾಡ್ನಲ್ಲಿರುವ ಕೋಯಿಕ್ಕೋಡ್-ಪಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಾಗ ಸಂಭವಿಸಿದ ಬೈಕ್ ಅಪಘಾತದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಅಲ್ಫೋನ್ಸಾ ಮೃತಪಟ್ಟಿದ್ದಳು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನ್ನನ್ನು ಸ್ಥಳೀಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಅಶ್ವಿನ್ನನ್ನು ಬಂಧಿಸಿದ್ದಾರೆ.