ಶ್ರೀನಗರ: ಕಾಶ್ಮೀರದಲ್ಲಿ ಏಷ್ಯಾದಲ್ಲೇ ಅತಿ ಉದ್ದದ ಸೈಕಲ್ ರೇಸ್ ಇಂದು (ಮಾ.1) ಆರಂಭಗೊಂಡಿದೆ. ಇದರಲ್ಲಿ ಒಬ್ಬ ಮಹಿಳೆ ಸೇರಿದಂತೆ 29 ಸೈಕಲ್ ಸವಾರರು 3,655 ಕಿ.ಮೀ. ಕ್ರಮಿಸಲಿದ್ದಾರೆ.
ಈ ರೇಸ್ ಅನ್ನು ವರ್ಲ್ಡ್ ಅಲ್ಟ್ರಾ ಸೈಕ್ಲಿಂಗ್ ಅಸೋಸಿಯೇಶನ್ ಆಯೋಜಿಸಿದ್ದು, ಸ್ಪರ್ಧಿಗಳು 12ರಿಂದ 14 ದಿನದೊಳಗಾಗಿ ರೇಸ್ ಪೂರ್ಣಗೊಳಿಸುವ ಸಾಧ್ಯತೆ ಇದೆ.ಸೈಕಲ್ ಸವಾರರ ಅನುಕೂಲಕ್ಕಾಗಿ ದಾರಿಯುದ್ದಕ್ಕೂ ಜಿಪಿಎಸ್ ಸೌಲಭ್ಯ ಅಳವಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
'ರೇಸ್‌ನಲ್ಲಿ ಸೈಕಲ್ ಸವಾರರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ 3,655 ಕಿ.ಮೀ. ದಾರಿ ಕ್ರಮಸಲಿದ್ದಾರೆ. ಇದು ಏಷ್ಯಾದಲ್ಲೇ ಅತಿ ಉದ್ದದ ಸೈಕ್ಲಿಂಗ್ ಸ್ಪರ್ಧೆ' ಎಂದು ಸ್ಪರ್ಧೆಯ ನಿರ್ದೇಶಕ ಜಿತೇಂದ್ರ ನಾಯಕ್ ತಿಳಿಸಿದ್ದಾರೆ.
'ರೇಸ್ ಪೂರ್ಣಗೊಳಿಸಿದ ಸೈಕಲ್ ಸವಾರರು ಮುಂದಿನ ಹಂತವಾದ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ' ಎಂದು ಜಿತೇಂದ್ರ ವಿವರಿಸಿದ್ದಾರೆ.
'ನನ್ನ ಒಂದು ಕಾಲು ಬಲಹೀನವಾಗಿದ್ದರೂ ಇನ್ನೊಂದು ಕಾಲಿನಿಂದಲೇ ಸೈಕಲ್ ತುಳಿಯುತ್ತೇನೆ. ಈ ಮೂಲಕ ಎಲ್ಲಾ ಮಹಿಳೆಯರಿಗೆ ಧನಾತ್ಮಕ ಸಂದೇಶ ರವಾನಿಸಲು ಕಾತುರದಲ್ಲಿದ್ದೇನೆ' ಎಂದು ಮಹಿಳಾ ಸೈಕ್ಲಿಂಗ್ ಸ್ಪರ್ಧಿ ಗೀತಾ ರಾವ್ ಹೇಳಿದ್ದಾರೆ.