ಸಾಮಾನ್ಯವಾಗಿ ಅಂಗೈ ತುರಿಸಿದರೆ ದುಡ್ಡು ಬರುತ್ತೆ, ಜೇಬು ತುಂಬುತ್ತದೆ ಎಂಬ ಮೂಡ ನಂಬಿಕೆ ಇದೆ. ಆದ್ರೆ ಇದು ನಿಜವಲ್ಲ. ಒಂದು ವೇಳೆ ಅಂಗೈ ತುರಿಸಿದರೆ ದುಡ್ಡು ಬರೋದಿಲ್ಲ ಬದಲಾಗಿ ನಿಮ್ಮ ಜೇಬು ಖಾಲಿಯಾಗುತ್ತದೆ.
ಹೌದು, ಆಶ್ವರ್ಯವಾದ್ರು ಇದು ನಿಜ. ಸುಖಾಸುಮ್ಮನೇ ಅಂಗೈ ತುರಿಸೋದಿಲ್ಲ. ಅಂಗೈ ತುರಿಸಿದರೆ ನಿಮಗೆ ಗಂಭೀರವಾದ ಸಮಸ್ಯೆ ಇದೆ ಎಂದು ಅರ್ಥ. ಹಾಗಾದ್ರೆ ಪದೇ ಪದೇ ಅಂಗೈ ತುರಿಸೋದಕ್ಕೆ ಕಾರಣವೇನು? ಇದರಿಂದಾಗಿ ಜನರಿಗೆ ಯಾವೆಲ್ಲಾ ಸಮಸ್ಯೆಗಳು ಎದುರಾಗಲಿದೆ? ಎಲ್ಲವನ್ನೂ ಹೇಳ್ತೀವಿ.
1. ಸೋರಿಯಾಸಿಸ್
ಸೋರಿಯಾಸಿಸ್ ಕಾಯಿಲೆ ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಚರ್ಮದ ಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಇದು ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ನೈಸರ್ಗಿಕ ಚರ್ಮದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಕೈ ತುರಿಸುವುದು, ಕೆಂಪಗಾಗುವುದು, ನೋವು ಕಾಣಿಸಿಕೊಳ್ಳುತ್ತದೆ. ಇದು ಎಲ್ಲಾ ಸಮಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಯಾವಾಗಲೋ ಒಮ್ಮೆ ಕಾಣಿಸುತ್ತದೆ.
2. ಒಣ ಚರ್ಮ
ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಚರ್ಮವು ಒಣಗಿ ತುರಿಸೋದಕ್ಕೆ ಶುರು ಆಗುತ್ತದೆ. ಆ ವೇಳೆ ನಿಮ್ಮ ಚರ್ಮಕ್ಕೆ ಹೊಂದುವ ಮೋಸ್ಚರೈಸರ್‌ಗಳನ್ನು ಬಳಸಿ ಅಥವಾ ಸಮಸ್ಯೆ ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
3. ಸೂಕ್ಷ್ಮ ಚರ್ಮವಾಗಿದ್ದಲ್ಲಿ ಜಾಗರೂಕರಾಗಿರಿ
ಅನೇಕರದ್ದು ಸೂಕ್ಷ್ಮ ತ್ವಚೆಯಾಗಿರುತ್ತದೆ. ಹೀಗಾಗಿ ಅಂತವರ ಕೈಗೆ ರಾಸಾಯನಿಕ ಪದಾರ್ಥಗಳು ತಗುಲಿದಾಗ ಬಹುಬೇಗ ತುರಿಸೋದಕ್ಕೆ ಶುರುವಾಗುತ್ತದೆ. ಇನ್ನೂ ನಿಮ್ಮ ಕೈಯನ್ನು ಬ್ರಷ್ ಅಥವಾ ಬೇರೆ ಯಾವುದೇ ಗಟ್ಟಿಯಾದ ವಸ್ತುವಿನಿಂದ ಉಜ್ಜುವುದರಿಂದಲೂ ಕೂಡ ತುರಿಸುವಿಕೆಯಂತಹ ಸಮಸ್ಯೆ ಉಂಟಾಗುತ್ತದೆ.
4. ಅಲರ್ಜಿ ಉಂಟಾದಾಗ
ಕೆಲವೊಂದು ಸಾರಿ ಅಲರ್ಜಿಯಾದಾಗಲೂ ಕೈ ತುರಿಸುವಿಕೆ ಉಂಟಾಗುತ್ತದೆ. ಅಲರ್ಜಿಯಾದ ಸಮಯದಲ್ಲಿ ತಕ್ಷಣಕ್ಕೆ ತುರಿಕೆ ಶುರುವಾಗೋದಿಲ್ಲ. ಕೆಲ ಸಮಯದ ಬಳಿಕ ಸಿಕ್ಕಾಪಟ್ಟೆ ಕೈ ತುರಿಸಲು ಶುರುವಾಗುತ್ತದೆ.
5. ಎಸ್ಜಿಮಾ(Eczema)
ಎಸ್ಚಿಮಾ ಕಾಯಿಲೆಯು ಕೂಡ ಒಂದು ರೀತಿಯ ಸೋಂಕು. ಇದು ಕೂಡ ಚರ್ಮವನ್ನು ಒಣಗುವಂತೆ ಮಾಡುತ್ತದೆ ಹಾಗೂ ಕೆಂಪಾಗಾಗುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮತ್ತು ಎಲ್ಲಾ ವಯೋಮಾನದವರಲ್ಲೂ ಕಾಣಿಸುತ್ತದೆ. ಇದು ಚರ್ಮದ ಮೇಲೆ ಕಜ್ಜಿಯಂತೆ ಕೂಡ ಕೆಂಪಗಾಗಿ ಕಾಣುವ ಲಕ್ಷವಾಗಿದೆ. ಕೆಲವೊಂದು ಬಾರಿ ಕೆಂಪು, ಬೂದು, ಕಂದು ತೇಪಗಳನ್ನು ಕೂಡ ಕಾಣಬಹುದಾಗಿದೆ. ಇದರ ಮತ್ತೊಂದು ಲಕ್ಷಣವೆಂದರೆ ಇದು ಚರ್ಮವನ್ನು ಒಣಗಿಸಿ ಬಿರುಕು ಬಿಡುವಂತೆ ಮಾಡುತ್ತದೆ.
ಇದು ಕೂಡ ಸೋರೋಸಿಸ್‌ನಂತೆಯೇ ಚರ್ಮದ ಮೇಲೆ ಕಾಣಿಸಿಕೊಂಡು ಅತೀವ ನೋವನ್ನು ನೀಡುತ್ತದೆ. ಆದ್ರೆ ಸರಿಯಾದ ಚಿಕಿತ್ಸೆ ನೀಡಿದರೆ ಸ್ವಲ್ಪ ದಿನಗಳ ನಂತರ ಸಂಪೂರ್ಣವಾಗಿ ಗುಣಮುಖವಾಗುತ್ತದೆ.
6. ಡಯಾಬಿಟಿಸ್
ರಕ್ತದ ಅಸಮರ್ಪಕ ಚಲನೆಯಿಂದ ಡಯಾಬಿಟಿಸ್ ರೋಗಿಗಳಲ್ಲಿ ಅಂಗೈಯಲ್ಲಿ ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಡಯಾಬಿಟಿಸ್ ರೋಗಿಗಳಲ್ಲಿ ಅಂಗೈಗಿಂತ ಹೆಚ್ಚಾಗಿ ಕಾಲಿನಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.
ಅಂಗೈ ತುರಿಸುವಿಕೆಗೆ ಚಿಕಿತ್ಸೆ ಹೇಗಿರಬೇಕು?
ನಿಮ್ಮ ಅಂಗೈ ಯಾವ ಕಾರಣಕ್ಕಾಗಿ ತುರಿಸುತ್ತಿದೆ ಎಂಬುವುದರ ಮೇಲೆ ವೈದ್ಯರು ಚಿಕಿತ್ಸೆ ನೀಡುತ್ತಾರೆ. ನೀವು ಆದಷ್ಟು ಬೇಗ ಚಿಕಿತ್ಸೆ ಪಡೆದರೆ ಸಮಸ್ಯೆಯಿಂದ ಹೊರಬರಬಹುದು. ಮತ್ತು ಮುಂದಾಗುವ ಅನಾಹುತವನ್ನು ತಪ್ಪಿಸಬಹುದು. ಒಂದು ವೇಳೆ ನೀವು ಒಣ ಚರ್ಮದಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ದಿನದಲ್ಲಿ ಕೆಲವು ಬಾರಿ ಮಾಸ್ಚರೈಸರ್ ಬಳಸಿ. ಇದು ನಿಮಗೆ ತುರಿಕೆ ಮತ್ತು ಒಣ ಚರ್ಮದಿಂದ ಮುಕ್ತಿ ನೀಡುತ್ತದೆ. ಒಣ ಚರ್ಮ ಬಿಟ್ಟು ಬೇರೆ ಯಾವುದಾದರೂ ಗಂಭೀರ ಕಾಯಿಲೆಗಳ ಲಕ್ಷಣ ಕಂಡು ಬಂದಲ್ಲಿ ತಡ ಮಾಡದೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇನ್ನೂ ಮುಂದೆ ಬಲಗೈ ತುರಿಸ್ತಿದೆ ದುಡ್ಡು ಬರುತ್ತೆ ಅಂತ ಮನೆಯಲ್ಲಿ ಸುಮ್ನೆ ಕೂರಬೇಡಿ. ತುರಿಕೆ ನಿಮಗೆ ಕಾಯಿಲೆಯ ಸೂಚನೆಯೂ ಆಗಿರಬಹುದು. ಆದ್ದರಿಂದ ತುರಿಕೆ ಶುರುವಾದ ತಕ್ಷಣ ಅದಕ್ಕೆ ಕಾರಣ ಏನೆಂದು ಕಂಡು ಕೊಂಡು ಚಿಕಿತ್ಸೆ ನೀಡಿದರೆ ಉತ್ತಮ.