ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಐವರು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಏಪ್ರಿಲ್ 18ರಿಂದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಸಲಿಂಗ ವಿವಾಹ ಅಂಗೀಕರಿಸುವ ಕುರಿತ ಅರ್ಜಿಗಳನ್ನು ಆಲಿಸಲಿದೆ ಎಂದು ಹೇಳಿದೆ.
ಈ ಸಂಬಂಧ ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಸಲಿಂಗ ವಿವಾಹದ ಕಾನೂನು ಮಾನ್ಯತೆ ವೈಯಕ್ತಿಕ ಕಾನೂನುಗಳು ಮತ್ತು ಅಂಗೀಕೃತ ಸಾಮಾಜಿಕ ಮೌಲ್ಯಗಳಿಗೆ ಸಂಪೂರ್ಣ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿದೆ.
ಅಲ್ಲದೆ ಸಲಿಂಗ ವಿವಾಹವನ್ನು ಕಾನೂನು ಬದ್ಧವಾಗಿ ಅಂಗೀಕರಿಸಬಹುದೇ ಎಂಬುದನ್ನು ಸಂಸತ್ತು ನಿರ್ಧರಿಸುತ್ತದೆ ಎಂದು ಕೇಂದ್ರ ಪ್ರತಿಪಾದಿಸಿದೆ.
ಇದು ಅತ್ಯಂತ ಮೂಲಭೂತ ಸಮಸ್ಯೆಯಾಗಿದ್ದು, ಈ ವಿಷಯದ ಕುರಿತಾದ ಯಾವುದೇ ರೀತಿಯ ನಿರ್ಧಾರವು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ನಮಗೆ ಗೊತ್ತು. ಸಾಂವಿಧಾನಿಕ ಪೀಠವು ಕಾನೂನಿನ ಬಹಳಷ್ಟು ಪ್ರಶ್ನೆಗಳನ್ನು ಮತ್ತು ಸಂವಿಧಾನದ ವ್ಯಾಖ್ಯಾನವನ್ನು ಎತ್ತಿಹಿಡಿಯುತ್ತದೆ ಎಂಬ ಕಾರಣದಿಂದ ಇದನ್ನುಆಲಿಸುವುದು ತಾರ್ಕಿಕವಾಗಿ ಸರಿಯಾಗಿದೆ ಎಂದು ಮುಖ್ಯ ನಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.