ನವದೆಹಲಿ: ಪುರುಷರು ಮತ್ತು ಮಹಿಳೆಯರ ವಿವಾಹಕ್ಕೆ ಕನಿಷ್ಠ 21 ವರ್ಷ ವಯಸ್ಸು ನಿಗದಿಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಈ ಅರ್ಜಿ ಮಾನ್ಯ ಮಾಡಿದರೆ ವಯೋಮಿತಿ ನಿಗದಿಗೆ ಕಾನೂನು ಮಾಡಲು ಸಂಸತ್‌ಗೆ ನಿರ್ದೇಶನ ನೀಡಿದಂತಾಗುತ್ತದೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲ ಅವರಿದ್ದ ಪೀಠ ಈ ವಿಷಯ ಶಾಸನಸಭೆ ಪರಿಮಿತಿಗೆ ಒಳಪಡುತ್ತದೆ ಎಂದು ತಿಳಿಸಿದೆ.
ಪುರುಷರು ಹಾಗೂ ಮಹಿಳೆಯರ ವಿವಾಹದ ಕನಿಷ್ಠ ವಯಸ್ಸು ಒಂದೇ ಇರಬೇಕು ಎಂದು ಕೋರಿ ವಕೀಲ ಅಶ್ವಿನ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿ ವಜಾಗೊಳಿಸಿದ್ದ ಫೆ.20ರ ಆದೇಶವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ಕೇಂದ್ರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಇದು ಶಾಸನ ಸಭೆ ವ್ಯಾಪ್ತಿಯಲ್ಲಿದೆ' ಎಂದರು.
ನ್ಯಾಯಾಲಯವು ಈ ಅರ್ಜಿ ಪರಿಗಣಿಸಿದರೆ 'ಕನಿಷ್ಠ ವಯಸ್ಸನ್ನು ನಿಗದಿಪಡಿಸುವಂತೆ ಸಂಸತ್ತಿಗೆ ನಿರ್ದೇಶನ ನೀಡಿದಂತಾಗುತ್ತದೆ' ಎಂದು ಸಿಜೆಐ ಅಭಿಪ್ರಾಯಪಟ್ಟರು.
ಶಾಹಿದಾ ಖುರೇಶಿ ಎಂಬುವರು ಸಲ್ಲಿಸಿದ ಅರ್ಜಿಯಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವಂತೆ ಕೋರಿದ್ದರು.