ನವದೆಹಲಿ: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ () ತೆರಿಗೆ ವಿಚಾರಕ್ಕೆ ಸಂಬಂಧಿಸಿ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿಯಾಗಿದೆ.
ದೆಹಲಿಯಲ್ಲಿ ಮಾ. 2ರಂದು ನಡೆಯಲಿರುವ ಜಿ- 20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಜೇಮ್ಸ್, ಭಾರತಕ್ಕೆ ಬಂದಿದ್ದಾರೆ.
ಸಭೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್, ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್, ಚೀನಾ ವಿದೇಶಾಂಗ ಸಚಿವ ಕಿನ್ ಗಾಂಗ್, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಇತ್ತೀಚೆಗಷ್ಟೇ ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಸತತ 60 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದರು.
ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ್ದ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ), 'ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆಗಳ 'ಪರಿಶೀಲನೆ' ಸಂದರ್ಭದಲ್ಲಿ, ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ' ಎಂದು ಹೇಳಿತ್ತು.
'ಇಂಗ್ಲಿಷ್ ಅಲ್ಲದೇ, ಭಾರತದ ಅನೇಕ ಭಾಷೆಗಳಲ್ಲಿ ಗಮನಾರ್ಹವೆನಿಸುವಷ್ಟು ವಿಷಯವಸ್ತುವನ್ನು ಮಾಧ್ಯಮ ಸಂಸ್ಥೆ ಬಳಕೆ ಮಾಡಿದೆ. ಕಂಪನಿಯು ತನ್ನ ಅಂಗಸಂಸ್ಥೆಗಳ ಮೂಲಕ ಭಾರತದಲ್ಲಿ ಹೊಂದಿರುವ ಕಾರ್ಯಾಚರಣೆಗಳ ಪ್ರಮಾಣಕ್ಕೂ, ಅವುಗಳು ಗಳಿಸಿದ ಆದಾಯ ಹಾಗೂ ಲಾಭಕ್ಕೂ ಹೊಂದಿಕೆಯಾಗದಿರುವ ಅಂಶ ಪರಿಶೀಲನೆ ವೇಳೆ ಕಂಡುಬಂದಿದೆ' ಎಂದು ಮಂಡಳಿ ಹೇಳಿತ್ತು.
'ಸಂಸ್ಥೆಯಿಂದಾದ ಕೆಲ ಪಾವತಿಗಳಿಗೆ ಸಂಬಂಧಿಸಿ ತೆರಿಗೆ ಸಂದಾಯ ಮಾಡಿಲ್ಲ. ಈ ರೀತಿ ಪಾವತಿಸಲಾದ ಹಣವು, ಮಾಧ್ಯಮಸಂಸ್ಥೆಯು ಭಾರತದಲ್ಲಿ ಗಳಿಸಿರುವ ಆದಾಯವೇ ಆಗಿದೆ ಎಂಬ ಮಾಹಿತಿಯನ್ನು ಮುಚ್ಚಿಟ್ಟಿರುವುದು ಕೂಡ ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ' ಎಂದೂ ಮಂಡಳಿ ತಿಳಿಸಿತ್ತು.