ಮುಳ್ಳೇರಿಯ: ಆದೂರು ಕೈತ್ತೋಡು ನಿವಾಸಿ, ಮಾಹಿತಿಹಕ್ಕು ಹೋರಾಟಗಾರ ಅಬ್ದುಲ್ ರಹಮಾನ್(40)ಅವರ ಮೃತದೇಹ ನಿಗೂಢ ಸ್ಥಿತಿಯಲ್ಲಿ ಆದೂರು ಸನಿಹದ ಗಾಳಿಮುಖ ಎಂಬಲ್ಲಿ ಪತ್ತೆಯಾಗಿದೆ. ಇವರು ಸಂಚರಿಸಿದ ಕಾರು ಅಲ್ಪ ದೂರ ಉಪೇಕ್ಷಿತ ಸಥಿತಿಯಲ್ಲಿ ಪತ್ತೆಯಾಗಿದೆ. ಜನಕೀಯ ನೀತಿ ವೇದಿಕೆ ಕಾರ್ಯಕರ್ತರೂ ಆಗಿರುವ ಅಬ್ದುಲ್ ರಹಮಾನ್ ಅವರು ನಾಟೆಕಲ್ಲು ಸನಿಹದ ಅಡ್ವಳ ಎಂಬಲ್ಲಿ ಕಳೆದ ಕೆಲವು ಸಮಯದಿಮದ ವಾಸಿಸುತ್ತಿದ್ದು,ಅಲ್ಲೇ ಸನಿಹ ಇವರಿಗೆ ಹೊಸ ಮನೆಯೂ ನಿರ್ಮಾಣವಾಗುತ್ತಿದೆ.
ಸೋಮವಾರ ಸಂಜೆ ಅಬ್ದುಲ್ ರಹಮಾನ್ ಗಾಳಿಮುಖ ತೆರಳಿದ್ದು, ನಂತರ ಇವರ ಬಗ್ಗೆ ಮಾಹಿತಿ ಇರಲಿಲ್ಲ. ಈ ಮಧ್ಯೆಮಂಗಳವಾರ ನಸುಕಿಗೆ ತನ್ನ ಸನೇಹಿತನೊಬ್ಬನಿಗೆ ಮೊಬೈಲ್ ಕರೆಮಾಡಿ, ತಂಡವೊಂದು ತನ್ನನ್ನು ಹಿಂಬಾಲಿಸುತ್ತಿದ್ದು, ಕೊಲೆಗೆ ಯತ್ನಿಸುತ್ತಿರುವುದಾಗಿ ಮಾಹಿತಿ ನೀಡಿದ್ದರು. ಮಾಹಿತಿ ಪಡೆದು ಗಾಳಿಮುಖ ಪರಿಸರದಲ್ಲಿ ಹುಡುಕಾಡುವ ಮಧ್ಯೆ ಗಾಳಿಮುಖ ಸಜನ್‍ಪಾರೆಯ ಬಾರ್ ವರಾಂಡದಲ್ಲಿ ಅಂಗಾತ ಮಲಗಿದ ಸಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಆಸುಪಾಸಿನ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಅಬ್ದುಲ್ ರಹಮಾನ್ ಭೀತಿಯಿಂದ ಹಿಂತಿರುಗಿ ನೋಡುತ್ತಾ ಗುಡ್ಡದ ಕಡೆಗೆ ಓಡುತ್ತಿರುವುದು ಪತ್ತೆಯಾಗಿದೆ. ಇನ್ನೊಂದು ದೃಶ್ಯದಲ್ಲಿ ಭಯದಿಂದ ಅತ್ತಿತ್ತ ಸುತ್ತಾಡುತ್ತಿರುವುದು, ನೀರು ಕುಡಿಯುತ್ತಿರುವ ದೃಶ್ಯ ಕಂಡುಬಂದಿದೆ. ಅಬ್ದುಲ್ ರಹಮಾನ್ ಅವರಿಗೆ ಹಲವು ಮಂದಿ ವಿರೋಧಿಗಳಿರುವುದಾಗಿಯೂ ಮಾಹಿತಿಯಿದೆ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಾಹಿತಿಹಕ್ಕು ಹೋರಾಟಗಾರನ ಮೃತದೇಹ ಗಾಳಿಮುಖದಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆ
0
ಮಾರ್ಚ್ 28, 2023