ಠಾಣೆ: 'ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮುಂಬೈ- ಗೋವಾ ಹೆದ್ದಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು' ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ತಿಳಿಸಿದರು.
ಪನವೇಲ್‌ನಲ್ಲಿ ಪಲಸ್ಪೆ-ಇಂದುಪುರ ಹೆದ್ದಾರಿ ಹಾಗೂ ಇತರ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 'ಗುತ್ತಿಗೆದಾರರ ಸಮಸ್ಯೆ, ಭೂ ಸ್ವಾಧೀನ ಹಾಗೂ ಅನುಮತಿ ನೀಡಿಕೆಯಂತಹ ಕೆಲವು ಸಮಸ್ಯೆಗಳಿಂದ ಕೊಂಕಣ ಪ್ರದೇಶದ ಹಲವು ಅಭಿವೃದ್ಧಿ ಕಾಮಗಾರಿಗಳು ನಿಂತಿವೆ' ಎಂದರು.
ಇದೇ ವೇಳೆ, ₹ 13,000 ಕೋಟಿ ಮೊತ್ತದಲ್ಲಿ ಮಾರ್ಬೆ- ಕಾರಂಜಾಡೆ ರಸ್ತೆಯನ್ನು ನಿರ್ಮಾಣ ಮಾಡುವುದಾಗಿ ಗಡ್ಕರಿ ಘೋಷಿಸಿದರು. ಇದು ಜವಾಹರಲಾಲ್ ನೆಹರೂ ಬಂದರಿನ ಮೂಲಕ ಹಾದುಹೋಗಲಿದ್ದು, ಮುಂಬೈ- ದೆಹಲಿ ನಡುವಿನ ಪ್ರಯಾಣ ಅವಧಿಯನ್ನು 12 ಗಂಟೆಯಷ್ಟು ತಗ್ಗಿಸಲಿದೆ ಎಂದರು.