ಭುವನೇಶ್ವರ: ಪ್ರತಿಪಕ್ಷಗಳು ಭಾರತದ ನ್ಯಾಯಾಂಗದ ಆಶಯಗಳನ್ನು ಅನುಮಾನಿಸುವ ಮೂಲಕ ದೇಶದ ಪ್ರತಿಷ್ಠೆಯನ್ನು ಹಾಳುಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಶನಿವಾರ ಆರೋಪಿಸಿದ್ದಾರೆ.
ಪೂರ್ವ ರಾಜ್ಯಗಳ ಕೇಂದ್ರ ಸರ್ಕಾರದ ವಕೀಲರ ಮೊದಲ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಿಜಿಜು, ಭಾರತೀಯ ನ್ಯಾಯಾಂಗವನ್ನು ಪ್ರಶ್ನಿಸುವಂತಿಲ್ಲ. ವಿಶೇಷವಾಗಿ ನ್ಯಾಯಾಧೀಶರ ನಿರ್ಧಾರವನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
"ಕೆಲವೊಮ್ಮೆ, ಭಾರತೀಯ ನ್ಯಾಯಾಂಗವು ಬಿಕ್ಕಟ್ಟಿನಲ್ಲಿದೆ ಎಂದು ಜಗತ್ತಿಗೆ ತಿಳಿಸಲು ದೇಶದ ಒಳಗೆ ಮತ್ತು ಹೊರಗಿನಿಂದ ಪ್ರಯತ್ನಗಳು ನಡೆದಿವೆ. ಈ ಮೂಲಕ ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂಬ ಸಂದೇಶ ನೀಡಲಾಗಿದೆ. ಆದರೆ ಇದು ಉದ್ದೇಶಪೂರ್ವಕವಾಗಿದ್ದು, ಕೆಲವು ಗುಂಪುಗಳು ದೇಶದ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ ” ಎಂದು ಕೇಂದ್ರ ಸಚಿವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತೀಯ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನೀಡಿದ ಹೇಳಿಕೆಗೆ ಕೇಂದ್ರ ಕಾನೂನು ಸಚಿವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.