ನಾಗ್ಪುರ: ಶಂಕಿತ ಲೈಂಗಿಕ ಶೋಷಣೆಯ ಬಲಿಪಶುವಾದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಯೂಟ್ಯೂಬ್‍ನಲ್ಲಿ ವಿಡಿಯೊ ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದು, ನವಜಾತ ಶಿಶುವನ್ನು ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಂದ 15 ವರ್ಷ ವಯಸ್ಸಿನ ಈ ಬಾಲಕಿ ಲೈಂಗಿಕ ಶೋಷಣೆಗೆ ಒಳಗಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ.
ತನಗೆ ಆರೋಗ್ಯ ಸಮಸ್ಯೆ ಇದೆ ಎಂದು ತಾಯಿಗೆ ಹೇಳಿ, ತಾನು ಗರ್ಭಿಣಿಯಾದ ವಿಚಾರವನ್ನು ಬಾಲಕಿ ಮುಚ್ಚಿಟ್ಟಿದ್ದಳು ಎಂದು ಹೇಳಲಾಗಿದೆ. ಅಂಬಝರಿ ಪ್ರದೇಶದ ನಿವಾಸಿಯಾದ ಈ ಯುವತಿ ರಹಸ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಮನೆಯಲ್ಲೇ ಯು ಟ್ಯೂಬ್ ಸಹಾಯದಿಂದ ಹೆರಿಗೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಳು ಎಂದು ಅಧಿಕಾರಿ ವಿವರಿಸಿದ್ದಾರೆ. ಮಾರ್ಚ್ 2ರಂದು ಆಕೆ ಹೆಣ್ಣುಮಗುವಿಗೆ ಜನ್ಮನೀಡಿದ ಆಕೆ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ. ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಶಿಶುವಿನ ಶವವನ್ನು ಹುದುಗಿಸಿ ಇಟ್ಟಿದ್ದಳು ಎಂದು ಹೇಳಿದ್ದಾರೆ.
ಮನೆಗೆ ಮರಳಿದ ತಾಯಿ ಆರೋಗ್ಯದ ಬಗ್ಗೆ ತನ್ನ ಮಗಳನ್ನು ವಿಚಾರಿಸಿದ್ದಾಳೆ. ಆಗ ಬಾಲಕಿ ಎಲ್ಲ ಘಟನೆಗಳನ್ನು ಹೇಳಿಕೊಂಡಿದ್ದಾಳೆ. ಆ ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನವಜಾತ ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.